ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟೆಕ್ಕಿಗೆ ಗ್ಯಾಂಗ್ವೊಂದು ಹನಿಟ್ರ್ಯಾಪ್ ಮಾಡಿರುವ ಪ್ರರಕಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತಸ್ಲಿಮ್ ಪಾಶ, ನೇಹಾ ಫಾತಿಮಾ, ಮಹಮ್ಮದ್ ಅರ್ಬಾಜ್ ಬಂಧಿತ ಆರೋಪಿಗಳು. ಈ ಗ್ಯಾಂಗ್ ಗಾರೆಪಾಳ್ಯದ ನಿವಾಸಿಯಾದ ಟೆಕ್ಕಿಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಸಲುಗೆ ಬೆಳೆಸಿಕೊಂಡಿತ್ತು. ಅದೇ ಸಲುಗೆಯಿಂದ ಬಲೆಗೆ ಬೀಳಿಸಿಕೊಂಡಿತ್ತು.
ಆಗಾಗ ಸೂಪರ್ಮಾರ್ಕೆಟ್ಗೆ ತೆರಳುತ್ತಿದ್ದ ಟೆಕ್ಕಿಯನ್ನು ಗ್ಯಾಂಗ್ನ ಮಹಿಳೆ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಪರಿಚಯ ಸ್ನೇಹಕ್ಕೆ ತಿರುಗಿ ಟೆಕ್ಕಿ ಮತ್ತು ಮಹಿಳೆ ವೀಕೆಂಡ್ಗಳಲ್ಲಿ ಜೊತೆಗೆ ಓಡಾಡಿದ್ದಾರೆ. ಇದೇ ಸಲುಗೆಯಿಂದ ಮಹಿಳೆ ತನ್ನ ಕುಟುಂಬದವರನ್ನು ಪರಿಚಯುಸುತ್ತೇನೆಂದು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಮಹಿಳೆ ಮನೆಯಲ್ಲಿ ಟೆಕ್ಕಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಸಂಬಂಧಿಕರೆಂದು ಹೇಳಿಕೊಂಡು ಬಂದ ಗ್ಯಾಂಗ್ನ ಇತರ ಸದಸ್ಯರು ಮನೆಗೆ ನುಗ್ಗಿ ಫೋಟೋ ತೆಗೆದು 10 ಲಕ್ಷ ರೂ. ನೀಡುವಂತೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ.
ಹಣ ಕೊಡದಿದ್ದರೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದರಂತೆ. ಅಲ್ಲದೇ ಟೆಕ್ಕಿ ಬಳಿಯಿದ್ದ ಐಷಾರಾಮಿ ಕಾರು, 37 ಸಾವಿರ ರೂ. ಹಣ, ಮೊಬೈಲ್ ಫೋನ್ ಅನ್ನು ಗ್ಯಾಂಗ್ ಕಿತ್ತುಕೊಂಡಿದೆ. ಈ ಸಂಬಂಧ ಟೆಕ್ಕಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ತಂದೆಯಿಂದಲೇ ಮಗನ ಬರ್ಬರ ಹತ್ಯೆ.. ಆಸ್ತಿ ವಿಚಾರವಾಗಿ ಕೊಲೆ ಮಾಡಿರುವ ಶಂಕೆ