ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಪೂರೈಕೆದಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ ಹಿನ್ನೆಲೆ, ಪಾರ್ಟಿ ಆಯೋಜಕರು ನಗರದ ಹೊರಗೆ ಮತ್ತು ಹೊರ ಜಿಲ್ಲೆಗಳಿಗೆ ಸ್ಥಳಾಂತರ ಆಗುವ ಸಾಧ್ಯತೆಯಿದೆ. ಹಾಗಾಗಿ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಠಿಣ ಕ್ರಮಕೈಗೊಳ್ಳಲು ಸೂಚನೆ ನೀಡಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಮಾತನಾಡಿ, ಮಾದಕ ವಸ್ತುಗಳ ಕುರಿತು ತನಿಖೆ ಮುಂದುವರೆದಿದೆ. ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಐಜಿಗಳ ಜೊತೆ ಚರ್ಚೆ ನಡೆಸಿ, ಕೆಲ ಸೂಚನೆಗಳನ್ನು ನೀಡಿದ್ದೇನೆ. ಗಡಿ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ಪೂರೈಕೆ ತಡೆಯಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಪದೇ ಪದೆ ಅಪರಾಧ ಪ್ರಕರಣಗಳಲ್ಲಿ ತೊಡಗುವವರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ ಮಾಡಲು ಸೂಚಿಸಿದ್ದೇನೆ. ಫಾರ್ಮಾಸ್ಯುಟಿಕಲ್ನಲ್ಲಿ ಕೆಲವು ಮಾದಕ ವಸ್ತುಗಳ ಬಳಕೆ ಮಾಡುತ್ತಾರೆ, ಅದರ ದುರುಪಯೋಗ ಆಗುತ್ತಿದೆ. ಈ ರೀತಿಯ ದುರುಪಯೋಗ ತಡೆಯಲು ಸೂಚನೆ ನೀಡಿದ್ದೇನೆ ಎಂದರು.
ಕೆಲ ದೇಶಗಳಲ್ಲಿ ಕಡಿಮೆ ಹಂತದ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತವೆ. ಯಾವ ದೇಶಗಳಲ್ಲಿ ಮಾದಕ ವಸ್ತುಗಳು ಉತ್ಪಾದನೆಯಾಗುತ್ತದೆಯೋ. ಅಂತಹ ದೇಶಗಳಿಂದ ಕಾರ್ಗೋಗಳಲ್ಲಿ ಕೊರಿಯರ್ ಮೂಲಕ ಪಾರ್ಸೆಲ್ ಬರುತ್ತಿವೆ. ಅಂತಹ ಜಾಲಗಳ ಮೇಲೆ ನಿಗಾವಹಿಸಿ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.
ಆಫ್ರಿಕನ್ ಪ್ರಜೆ ಲೌಮ್ ಪೇಪರ್ ಸಾಂಬಾನನ್ನು ಬಂಧಿಸಲಾಗಿದೆ. ಆತ ಒಬ್ಬ ಪೆಡ್ಲರ್, ಹಲವು ಜನರಿಗೆ ಸಾಂಬಾ ಮಾದಕ ವಸ್ತುಗಳ ಪೂರೈಕೆ ಮಾಡಿದ್ದಾನೆ. ಈತನಿಂದ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ, ಜೊತೆಗೆ ಎಫ್ಐಆರ್ ಹಾಕಿರುವ ಆರೋಪಿಗಳ ತೀವ್ರ ತನಿಖೆ ಆಗಲಿದೆ. ಯಾರು, ಎಷ್ಟು ಪ್ರಭಾವಿ ಇದ್ದರೂ ಕ್ರಮಕೈಗೊಳ್ಳುತ್ತೇವೆ. ಸಿನಿಮಾ, ರಾಜಕೀಯದಲ್ಲಿರುವವರು ಸಾಕ್ಷಿ ಸಮೇತ ಸಿಕ್ಕಿದರೆ ಖಂಡಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.