ಬೆಂಗಳೂರು: ಜಿಂದಾಲ್ಗೆ 3667.31 ಎಕರೆ ಭೂಮಿ ಪರಾಭಾರೆ ಮಾಡುವ ಸರ್ಕಾರದ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಗೃಹ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಕಂಪನಿಗೆ ಭೂಮಿಯನ್ನು ಮಾರಾಟ ಮಾಡಲು ಸಚಿವ ಸಂಪುಟ ಕೈಗೊಂಡ ತೀರ್ಮಾನಕ್ಕೆ ದೋಸ್ತಿ ಪಕ್ಷದ ಮುಖಂಡರಿಂದ ಹಿಡಿದು ಪ್ರತಿಪಕ್ಷ ಬಿಜೆಪಿ ಮತ್ತು ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಂದಾಲ್ಗೆ ಭೂಮಿ ನೀಡುವ ತೀರ್ಮಾನದ ಕುರಿತು ಮತ್ತೊಮ್ಮೆ ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸುವುದಾಗಿ ಪ್ರಕಟಿಸಿದ್ದರು.
ಅದರಂತೆ ಕ್ಯಾಬಿನೆಟ್ ಉಪ ಸಮಿತಿ ರಚಿಸಲಾಗಿದ್ದು, ಗೃಹ ಸಚಿವ ಎಂ.ಬಿ.ಪಾಟೀಲ್ ಇದರ ಅಧ್ಯಕ್ಷರಾಗಿದ್ದಾರೆ. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಸಮಾಜ ಕಲ್ಯಾಣ ಸಚಿವ ಮಲ್ಲಿಕಾರ್ಜುನ ಖರ್ಗೆ ಉಪ ಸಮಿತಿಯ ಸದಸ್ಯರಾಗಿದ್ದಾರೆ.
ಜಿಂದಾಲ್ ಕಂಪನಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 3667.31 ಎಕರೆ ಭೂಮಿಯನ್ನು ಮೆ. ಜೆ.ಎಸ್. ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆ ಪರವಾಗಿ ಶುದ್ಧ ಕ್ರಯ ಪತ್ರ ಜಾರಿಗೊಳಿಸುವ ಪ್ರಸ್ತಾವನೆ ಬಗ್ಗೆ ಪರಿಶೀಲಿಸಿ ಕ್ಯಾಬಿನೆಟ್ಗೆ ಸೂಕ್ತ ಶಿಫಾರಸುಗಳನ್ನು ಮಾಡುವಂತೆ ಉಪ ಸಮಿತಿಗೆ ತಿಳಿಸಲಾಗಿದೆ.
ಈ ಉಪ ಸಮಿತಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಇಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ. ಜಿಂದಾಲ್ಗೆ ಭೂಮಿ ನೀಡುವ ಕುರಿತು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದ್ದರೂ ಎಷ್ಟು ದಿನಗಳಲ್ಲಿ ಅಧ್ಯಯನ ನಡೆಸಿ ವರದಿ ನೀಡಬೇಕೆನ್ನುವ ಬಗ್ಗೆ ಕಾಲಮಿತಿ ನಿಗದಿಪಡಿಸಿಲ್ಲ.