ಬೆಂಗಳೂರು: ಗಾಂಜಾ ದಂಧೆ ಪ್ರಕರಣದಲ್ಲಿ ಮಾಧ್ಯಮಗಳು ಸೇರಿದಂತೆ ಯಾವುದೇ ಮೂಲಗಳಿಂದ ಯಾರ ಹೆಸರು ಕೇಳಿ ಬಂದರೂ ಅವರ ಬಗ್ಗೆಯೂ ತನಿಖೆಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಿಸಿಬಿ ಕಾರ್ಯಾಚರಣೆ ಮುಂದುವರೆಯಲಿದೆ. ಕೆಲವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದರು.
ಮಾಧ್ಯಮ ಹಾಗೂ ಇತರ ಕಡೆಯಿಂದ ಬರುವ ಮಾಹಿತಿ ಆಧರಿಸಿಯೂ ಕ್ರಮ ಕೈಗೊಳ್ಳಬೇಕಾಗಲಿದೆ. ಡ್ರಗ್ ಅಂದ್ರೆ ಹಣಕಾಸಿನ ಆಯಾಮ ಕೂಡ ಇರುತ್ತದೆ. ಹವಾಲಾ ಇದೆ. ದೇಶದ ವಿವಿದೆಡೆ ಹಣಕಾಸಿನ ವಹಿವಾಟು ನಡೆದಿರುತ್ತದೆ. ಹಾಗಾಗಿ ಎಲ್ಲಾ ಆಯಾಮದಿಂದಲೇ ತನಿಖೆ ನಡೆಸಬೇಕಾಗಲಿದೆ ಎಂದರು.
ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಯಾಕೆ ಬಂಧಿಸಿಲ್ಲ ಎನ್ನುವ ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಯಾವ ಯಾವುದೇ ಮೂಲಗಳಿಂದ ಯಾರ ಹೆಸರು ಬಂದರೂ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.