ಬೆಂಗಳೂರು: ರಮೇಶ್ ಜಾರಕಿಹೊಳಿ ಅವರನ್ನು ವಶಕ್ಕೆ ಪಡೆಯಬೇಕೋ ಬೇಡವೋ ಎಂಬುದನ್ನು ಎಸ್ ಐಟಿ ನಿರ್ಧರಿಸುತ್ತದೆ. ಕಾನೂನು ಮತ್ತು ಗೃಹ ಸಚಿವನಾದರೂ ಎಸ್ಐಟಿ ತನಿಖೆ ವಿಷಯದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ ಐಟಿ ತನ್ನ ಕೆಲಸ ಮಾಡುತ್ತಿದೆ. ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಕಾನೂನಿನ ಪ್ರಕಾರವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಅನಗತ್ಯ ಟೀಕೆ, ಪ್ರತಿಭಟನೆ, ಟ್ವೀಟ್, ಮಾಡಿ ಗೊಂದಲ ಸೃಷ್ಟಿಸುತ್ತಿದೆ. ಮೇಟಿ ಪ್ರಕರಣದಲ್ಲಿ ಕನಿಷ್ಠ ಎಫ್ಐಆರ್ ಕೂಡ ಹಾಕಿರಲಿಲ್ಲ. ಈ ಪ್ರಕರಣದಲ್ಲಿ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಪ್ರತಿಭಟನೆ, ಟ್ವೀಟ್, ಟೀಕೆಗಳು ಯಾವುದೂ ಎಸ್ ಐಟಿ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲ, ಸತ್ಯ ಹೊರಬರಬೇಕು ಎಂದರೆ ಎಸ್ಐಟಿ ತನಿಖೆಯಾಗಲೇಬೇಕು, ಹಿರಿಯ ಅಧಿಕಾರಿಗಳಿದ್ದಾರೆ ಅವರು ಯಾರ ಪರ, ವಿರುದ್ಧವೂ ಇಲ್ಲ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ ಎಂದರು.
ಓದಿ : ಯುವತಿ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆದ ಜಾರಕಿಹೊಳಿ ಸಹೋದರರು: ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಗೆ ಸಿದ್ಧತೆ
ಬಂಡಾಯ ಅಭ್ಯರ್ಥಿ ನಿಲ್ಲಿಸುವ ಹಿಂದೆ ಯಾರಿದ್ದಾರೆಂದು ಗೊತ್ತು: ಬಸವಕಲ್ಯಾಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಶರಣು ಸಲಗಾರ ನಿಶ್ಚಿತವಾಗಿ 20,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಖೂಬಾ ನಮ್ಮ ಸ್ನೇಹಿತರೆ, ಅವರೂ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ನಾನು, ಸೋಮಣ್ಣ ಮತ್ತು ಸವದಿಯವರು ಮಾತುಕತೆ ನಡೆಸಿದ್ದೇವೆ. ನಾಮಪತ್ರ ವಾಪಸ್ ಪಡೆಯಲು ಇನ್ನು ಸಮಯವಿದೆ, ನೋಡೋಣ ಎಂದರು. ಬಂಡಾಯ ಅಭ್ಯರ್ಥಿ ನಿಲ್ಲಿಸುವ ಹಿಂದೆ ಯಾರಿದ್ದಾರೆ, ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿದೆ, ಯಾರು ಏನೇ ಮಾಡಿದರೂ ನಮ್ಮ ಗೆಲುವು ಖಚಿತ ಎಂದರು.