ಬೆಂಗಳೂರು: ಮೈಸೂರು ವಿದ್ಯಾರ್ಥಿನಿ ರೇಪ್ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಲಘುವಾಗಿ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ವಿಕಾಸಸೌಧಲ್ಲಿ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ನನಗೆ ನೋವು ತಂದಿದೆ. ಇಂತಹ ಪ್ರವಾಸಿ ತಾಣಗಳಲ್ಲಿ ಈ ತರಹ ಆದರೆ, ಜನ ಸಹಜವಾಗಿ ಭಯ ಬೀಳ್ತಾರೆ. ನಿನ್ನೆ ಸಂಜೆ 7.30ಕ್ಕೆ ಯುವತಿ ಅಲ್ಲಿಗೆ ಹೋದಾಗ ದುರಾತ್ಮರು ಅವರನ್ನು ಫಾಲೋ ಮಾಡಿದ್ದಾರೆ. ನಾನು ನಾಳೆ ಮೈಸೂರಿಗೆ ಹೋಗುತ್ತೇನೆ. ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದೇನೆ. ಈಗಾಗಲೇ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಉನ್ನತ ಅಧಿಕಾರಿಗಳನ್ನು ಬೆಂಗಳೂರಿಂದ ಮೈಸೂರಿಗೆ ಕಳುಹಿಸಿದ್ದೇವೆ. ಇದುವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ ಎಂದರು.
ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ
ತನಿಖಾ ಸಂದರ್ಭದಲ್ಲಿ ಮಾಹಿತಿ ಹೇಳಲೂ ಆಗುವುದಿಲ್ಲ. ಮೈಸೂರು ತುಂಬ ಶಾಂತವಾಗಿ ಇರುವಂತ ಜಾಗ. ಜನ ನೆಮ್ಮದಿಯಿಂದ ಬದುಕ್ತಿದ್ದಾರೆ. ಈ ತರಹದ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ತಂಡಗಳನ್ನಾಗಿ ಮಾಡಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದರು.
ಇದನ್ನೂ ಓದಿ : ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ Gangrape
ಗಣೇಶ ಚತುರ್ಥಿ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೂರನೇ ಅಲೆ ಬರಲಿದೆ ಎನ್ನುವುದನ್ನು ತಜ್ಞರು ಹೇಳ್ತಿದ್ದಾರೆ. ಹೇಗೆ ಹಬ್ಬವನ್ನು ಆಚರಿಸಬೇಕು ಅನ್ನೋದನ್ನು ನಾವು ಕುಳಿತು ಚರ್ಚೆ ಮಾಡಿ ಸಿಎಂ ಜೊತೆಗೂ ಮಾತನಾಡಿ ನಿರ್ಧರಿಸ್ತೇವೆ. ಹಬ್ಬಕ್ಕೆ ಅವಕಾಶ ಕೊಡಬೇಕು ಅಂತ ನಮ್ಮದೇ ಶಾಸಕರು ಒತ್ತಾಯ ಮಾಡ್ತಿದ್ದಾರೆ. ಮೊದಲು ಜೀವ, ಆಮೇಲೆ ಉಳಿದಿದ್ದೆಲ್ಲ. ಇಡೀ ಹಬ್ಬವನ್ನು ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಆಚರಣೆಗಾಗಿ ನಿಯಮ ಸಡಿಲಿಸಬೇಕೋ, ಬಿಗಿ ಗೊಳಿಸಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲಿದ್ದೇವೆ ಎಂದರು.
ಟೀಕೆ ಮಾಡುವವರಿಗೆ ಏನೂ ಗೊತ್ತಿಲ್ಲ
ಆರ್ಎಎಸ್ಎಸ್ ಅನ್ನು ತಾಲಿಬಾನಿಗೆ ಹೋಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರಿಗೆ ಮಾತನಾಡಲು ಯಾವುದೇ ವಿಚಾರ ಇಲ್ಲ. ಮೋದಿ ಸರ್ಕಾರ ಬಂದ ಬಳಿಕ ಅವರಿಗೆ ಹೇಳಲು ಏನೂ ವಿಷಯವಿಲ್ಲ. ಅದಕ್ಕೆ ಏನೇನೋ ಹೇಳುತ್ತಾ ಇರುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ಆರ್ಎಎಸ್ಎಸ್ ಬಗ್ಗೆ ಮಾಹಿತಿ ಇಲ್ಲ ಎಂದು ತಿರುಗೇಟು ನೀಡಿದರು.