ಬೆಂಗಳೂರು: ಕೊರೊನಾ ಸೋಂಕಿತರಿಗೆ ಲಿಕ್ವಿಡ್ ಆಕ್ಸಿಜನ್ ಕೊರತೆಯಾಗಿದೆ. ಆಕ್ಸಿಜನ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಆಕ್ಸಿಜನ್ ಪೂರೈಕೆ ಮಾಡುವುದಕ್ಕೆ ನಿಮಗೆ (ಸರ್ಕಾರಕ್ಕೆ ) ತೊಂದರೆಯೇನು? ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಮೆಡಿಕಲ್ ಕಿಟ್ ಹಗರಣದ ಬಗ್ಗೆ ಚರ್ಚೆ ವೇಳೆ ಮಾತನಾಡಿದ ಅವರು, ನಮ್ಮಲ್ಲೇ ತಯಾರಾಗುವ ಆಕ್ಸಿಜನ್ ಅನ್ನು ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿಗೆ ಕಳುಹಿಸಲಾಗುತ್ತಿದೆ. ಆದರೆ, ನಮ್ಮಲ್ಲೇ ಯಾಕೆ ಅದನ್ನು ಪೂರೈಸುತ್ತಿಲ್ಲ. ಆಕ್ಸಿಜನ್ ಕೊರತೆಯಿಂದ ಬೀದರ್, ಬೆಳಗಾವಿ, ಬೆಂಗಳೂರಿನಲ್ಲಿ ಎಷ್ಟೋ ಜನ ಸತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ಕಳೆದ ವರ್ಷ 37 ಸಾವಿರ ಜನ ಸಾವನ್ನಪ್ಪಿದ್ದರು. ಈ ವರ್ಷ 49,135 ಸಾವಿರ ಜನ ಸತ್ತಿದ್ದಾರೆ. 12 ಸಾವಿರ ಮಂದಿ ಹೆಚ್ಚುವರಿ ಸಾವಾಗಿದೆ. 10,250 ಸಾವು ಕೊರೊನಾ ಹೊರತಾಗಿ ಆಗಿದೆ. ಇದು ಈ ಜುಲೈವರೆಗಿನ ಸಾವಿನ ಸಂಖ್ಯೆ. ಇದರ ಬಗ್ಗೆ ಮಾಹಿತಿ ಇದೆ ಎಂದು ಅಂಕಿ - ಅಂಶಗಳ ಸಹಿತ ಮಾಹಿತಿ ನೀಡಿದರು.
ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.