ಬೆಂಗಳೂರು : ಕೊರೊನಾ ಹಿನ್ನೆಲೆ 2019-20ನೇ ಸಾಲಿನ ಐದು ವರ್ಷದ ಕಾನೂನು ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೂಟ್‌ಕೋರ್ಟ್ ಹಾಗೂ ಇಂಟರ್ನ್‌ಶಿಪ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಈ ಕುರಿತು ಬೆಂಗಳೂರು ವಿವಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಆರ್.ಗೌತಮ್ ಹಾಗೂ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಭಾರತೀಯ ವಕೀಲರ ಪರಿಷತ್ತಿನ ಪರ ವಕೀಲರಾದ ಶ್ರೀಧರ್ ಪ್ರಭು ಪೀಠಕ್ಕೆ ಮಾಹಿತಿ ನೀಡಿ, ಕಾನೂನು ಕೋರ್ಸ್‌ಗಳ ವಿಚಾರವಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಜನರಲ್ ಕೌನ್ಸಿಲ್ ಸಭೆ ನಡೆಸಿ ಕೈಗೊಂಡಿರುವ ನಿರ್ಣಯಗಳನ್ನು ವಿವರಿಸಿದರು.
ಕಾನೂನು ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸೀಮಿತವಾಗಿ ವಿವಿ ರೂಪಿಸಿರುವ ಪರ್ಯಾಯ ವ್ಯವಸ್ಥೆಗೆ ಬಿಸಿಐ ಒಪ್ಪಿಗೆ ಇದೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.