ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿದ ಆದೇಶವನ್ನು ಮುಂದುವರಿಸುವಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಾಹನಗಳ ನಿಷೇಧ ಮುಂದುವರಿಸುವಂತೆ ನಿರ್ದೇಶಿಸಲು ಕೋರಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಹಾಗೂ ವಕೀಲ ಉಮೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಬಿವಿ ನಾಗರತ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶ, ಭೂಸಾರಿಗೆ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ:
ಲಾಕ್ಡೌನ್ ಸಂದರ್ಭದಲ್ಲಿ ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ ವಾಯುಮಾಲಿನ್ಯ ಕಡಿಮೆಯಾಗಿ ಪಾರ್ಕ್ ಸ್ವಚ್ಛ ಗೊಂಡಿರುವುದು ಅಷ್ಟೇ ಅಲ್ಲದೆ ಹಸಿರಿನಿಂದ ಕಂಗೊಳಿಸುತ್ತಿದೆ. ಹೀಗಾಗಿ ಪಾರ್ಕ್ ಒಳಗೆ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಸ್ವಚ್ಛ ಗಾಳಿ ಸೇವನೆ ಕೂಡ ಮೂಲಭೂತ ಹಕ್ಕು ಆಗಿದ್ದು, ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದರಿಂದ ಮತ್ತೆ ಪಾರ್ಕ್ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.