ಬೆಂಗಳೂರು: ಚುನಾವಣಾ ಅಕ್ರಮ ಆರೋಪದಡಿ ಅನರ್ಹ ಶಾಸಕ ಮುನಿರತ್ನ ಅವರ ಆಯ್ಕೆ ಅಸಿಂಧುಗೊಳಿಸಿ ತಮ್ಮನ್ನು ಶಾಸಕ ಎಂದು ಘೋಷಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಇದೇ ವೇಳೆ, ಮುನಿರತ್ನ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಿರುವ ಮೂಲ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 15ಕ್ಕೆ ಮುಂದೂಡಿದೆ. ಚುನಾವಣೆಯಲ್ಲಿ ಅಕ್ರಮ ಎಸಗಿರುವ ಶಾಸಕ ಮುನಿರತ್ನ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿದ್ದ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರು ಕ್ಷೇತ್ರದಿಂದ ಆಯ್ಕೆ ಆಗಿರುವ ಮುನಿರತ್ನ ಅನರ್ಹಗೊಂಡಿದ್ದಾರೆ. ಹೀಗಾಗಿ ತಮ್ಮನ್ನು ಶಾಸಕನಾಗಿ ಘೋಷಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ಪೀಠ, ಅರ್ಜಿದಾರರ ಕೋರಿಕೆ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನ ವಜಾಗೊಳಿಸಿದೆ.
ಕ್ಷೇತ್ರಕ್ಕೆ ಜನಪ್ರತಿನಿಧಿ ಇಲ್ಲದಿರುವುದು ಸರಿಯಾದ ವ್ಯವಸ್ಥೆಯಲ್ಲ. ಆದರೆ, ಚುನಾವಣೆ ನಡೆಸಿ ಎಂದು ಆದೇಶಿಸಲು ಚುನಾವಣಾ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಹೀಗಾಗಿ ಚುನಾವಣೆ ನಡೆಸುವುದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸದ್ಯಕ್ಕೆ ಹೈಕೋರ್ಟ್ ತುಳಸಿ ಮುನಿರಾಜುಗೌಡ ಮಧ್ಯಂತರ ಅರ್ಜಿ ವಜಾಗೊಳಿಸಿರುವುದರಿಂದ ಅನರ್ಹ ಶಾಸಕ ಮುನಿರತ್ನಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.