ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ನಡೆಯಲಿರುವ ಭಾರತ- ಆಸ್ಟೇಲಿಯಾ ನಡುವಿನ ಫೈನಲ್ ಕ್ರಿಕೆಟ್ ಪಂದ್ಯ ತೀವ್ರ ಕೂತೂಹಲ ಮೂಡಿಸಿದೆ. ಹೈವೋಲ್ಟೇಜ್ ಪಂದ್ಯಕ್ಕೆ ನಗರದ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್ ಸಿಎ) ಕೂಡಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಕೇಂದ್ರದ ಸಿಎಎ ಹಾಗೂ ಎನ್ಸಿಆರ್ ವಿರೋಧ ಹಿನ್ನೆಲೆಯಲ್ಲಿ ಕೆಲವರು ಮೈದಾನದೊಳಗೆ ಬ್ಯಾನರ್, ಘೋಷಣೆಗಳಿರುವಟಿ-ಶರ್ಟ್ ಧರಿಸಿ ಪ್ರತಿಭಟಿಸುವ ಸಾಧ್ಯತೆ ಹಿನ್ನೆಲೆ ಪೊಲೀಸರು ಎಚ್ಚರ ವಹಿಸಿದ್ದಾರೆ. ಮೈದಾನ ಪ್ರವೇಶಿಸುವ ಮುನ್ನ ರಾಜಕೀಯ ಘೋಷಣೆಯ ಟೀಶರ್ಟ್ ಧರಿಸಿ ಬಂದರೆ ಅಂತಹವರಿಗೆ ಪ್ರವೇಶ ನಿರಾಕರಿಸಲಾಗುವುದು. ವಾಟರ್ ಬಾಟಲ್, ಬಲವಾದ ಆಯುಧಗಳು, ಲ್ಯಾಪ್‌ಟಾಪ್ ಸೇರಿದಂತೆ ಅನುಮಾನಾಸ್ಪದ ವಸ್ತುಗಳಿಗೆ ಕ್ರೀಡಾಂಗಣದೊಳಗೆ ಪ್ರವೇಶ ನಿಷೇಧಿಸಲು ಕೆಎಸ್‌ಸಿಎ ಸೂಕ್ತ ಕ್ರಮ ಕೈಗೊಂಡಿದೆ. ಕ್ರೀಡಾಂಗಣದ ಸುತ್ತಮುತ್ತಲು 1,200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಸ್ಟೇಡಿಯಂ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ:
ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದ್ದು, ಪಂದ್ಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪೇಕ್ಷಕರ ವಾಹನಗಳು ಬರುವುದರಿಂದ ಕೆಎಸ್‌ಸಿಎ ಸ್ಟೇಡಿಯಂ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಾಳೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.30 ರವರೆಗೆ ಈ ಮಾರ್ಗದ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ವಾಹನ ನಿಲುಗಡೆ ನಿಷೇಧಿತ ಸ್ಥಳಗಳು:
ಕ್ವೀನ್ಸ್ ರಸ್ತೆಯಲ್ಲಿ ಬಾಳೆಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಕಡೆ, ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಇಕ್ಕೆಲೆಗಳು, ಲಿಂಕ್ ರಸ್ತೆಯಲ್ಲಿ ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆವರೆಗೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ ಹಾಗೂ ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ ವಾಹನ ನಿಲುಗಡೆ ಇರುವುದಿಲ್ಲ.
ಕಬ್ಬನ್ ರಸ್ತೆಯಲ್ಲಿ ಸಿ.ಟಿ.ಓ. ವೃತ್ತದಿಂದ ಡಿಕನ್‌ಸನ್ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ, ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕಸನ್ ರಸ್ತೆ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಸೆೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ, ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆಯವರೆಗೆ ಹಾಗೂ ಆಶಿರ್ವಾದಂ ವೃತ್ತದವರೆಗೆ ಹಾಗೂ ಕಸ್ತೂರಬಾ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಹಾಗೂ ಮಲ್ಯ ಆಸ್ಪತ್ರೆ ರಸ್ತೆಯ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ, ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್‌ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ, ಪೌಂಟೇನ್ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಿದೆ.
ಆಟೋ ರಿಕ್ಷಾ ವಾಹನಗಳ ಸಂಚಾರ ನಿರ್ಬಂಧ:
ಕ್ವೀನ್ಸ್ ರಸ್ತೆಯ ಸಂಚಾರ ಮುಖ್ಯ ಕಚೇರಿಯ ಜಂಕ್ಷನ್‌ನಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಬದಿ, ಕಬ್ಬನ್ ರಸ್ತೆ, ಬಿ.ಆರ್.ವಿ.ಜಂಕ್ಷನ್‌ನಿಂದ ಸಿ.ಟಿ.ಓ.ವೃತ್ತದವರೆಗೆ ಎರಡೂ ಬದಿ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಎರಡೂ ಬದಿಗಳಲ್ಲಿ ಆಟೋ ರಿಕ್ಷಾ ವಾಹನಗಳ ಸಂಚಾರ ನಿರ್ಬಂಧಿಸಿದೆ.
ವಾಹನಗಳ ನಿಲುಗಡೆಗೆ ವ್ಯವಸ್ಥೆ:
ಪಂದ್ಯ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರ ವಾಹನಗಳನ್ನು ಸೇಂಟ್ ಜಾನ್ಸ್ ಇಂಡಿಯನ್ ಹೈಸ್ಕೂಲ್ ಮೈದಾನ, ಮಲ್ಯ ಆಸ್ಪತ್ರೆ ರಸ್ತೆ ಮತ್ತು ಸೇಂಟ್ ಜೋಯಿಸ್ ಬಾಲಕರ ಶಾಲೆ ಮ್ಯೂಸಿಯಂ ರಸ್ತೆ, ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ಅನುಕೂಲ ಮಾಡಲಾಗಿದೆ.
ವಿಶೇಷ ಕರ್ತವ್ಯಕ್ಕೆ ನಿಯೋಜಿಸಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಾಹನಗಳನ್ನು ಕಬ್ಬನ್‌ಪಾರ್ಕ್ ಒಳಭಾಗದ ಕೆ.ಜಿ.ಐ.ಡಿ ಬಿಲ್ಡಿಂಗ್ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ವಾಹನಗಳ ನಿಲುಗಡೆ ಸ್ಥಳ ಕೊರತೆ ಇರುವುದರಿಂದ ಹಾಗೂ ಕ್ರೀಡಾಂಗಣ ಸುತ್ತಮುತ್ತ ಸಂಚಾರ ದಟ್ಟಣೆ ತಪ್ಪಿಸಲು ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರು ಸಾರ್ವಜನಿಕ ಸಾರಿಗೆ (ಬಿಎಂಟಿಸಿ) ವಾಹನಗಳನ್ನು ಹಾಗೂ ಮೆಟ್ರೋ ಸೇವೆ ಬಳಸಲು ಕೋರಿದೆ.
ಎಂ.ಜಿ.ರಸ್ತೆಯಲ್ಲಿರುವ ಪ್ರಿಪೇಯ್ಡ್ ಆಟೋ ನಿಲ್ದಾಣ ಬಳಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಮೈದಾನಕ್ಕೆ ಹೋಗಲು ಈ ದಾರಿ ಬಳಸಿ:
ಚಿನ್ನಸ್ವಾಮಿ ಸ್ಟೇಡಿಯಂ ಒಳ ಮತ್ತು ಹೊರ ಹೋಗಲು ಪ್ರೇಕ್ಷಕರು(ಪಾದಚಾರಿಗಳಿಗೆ) ಗೇಟ್ ನಂ-1 ರಿಂದ ಗೇಟ್ ನಂ-6 ಕಬ್ಬನ್ ರಸ್ತೆಯಲ್ಲಿದ್ದು, ಪಾದಚಾರಿಗಳಿಗೆ ಹೋಗಲು ಅವಕಾಶ ಕಲ್ಪಿಸಿದೆ. ಗೇಟ್ ನಂ.7 ರಿಂದ ಗೇಟ್ ನಂ 11 ರವರೆಗೆ ಲಿಂಕ್ ರಸ್ತೆಯಲ್ಲಿದ್ದು, ಅನಿಲ್ ಕುಂಬ್ಳೆ ವೃತ್ತ ಮತ್ತು ಬಿ.ಆರ್.ವಿ.ವೃತ್ತದ ಕಡೆಯಿಂದ ಪ್ರೇಕ್ಷಕರು ಹೋಗಬಹುದು. ಗೇಟ್ ನಂ.12 ರಿಂದ 21ರವರೆಗೆ ಕ್ವೀನ್‌ಸ್ ರಸ್ತೆಯಲ್ಲಿದ್ದು, ವೀಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.