ಬೆಂಗಳೂರು: ನಗರದ ಸಿಂಗಸಂದ್ರದಲ್ಲಿರುವ ಏರ್ಕ್ರಾಫ್ಟ್ ಹೌಸಿಂಗ್ ಸೊಸೈಟಿ ಲೇಔಟ್ನಲ್ಲಿ ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೂ ಕ್ರಮ ಜರುಗಿಸಲು ವಿಳಂಬ ಮಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಬಿಡಿಎ ಆಯುಕ್ತರನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಸಿಂಗ್ರಸಂದ್ರದಲ್ಲಿ ಉದ್ಯಾನಗಳಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿರುವ ಕ್ರಮ ಪ್ರಶ್ನಿಸಿ ಸ್ಥಳೀಯ ನಿವಾಸಿ ಎಸ್.ಕೆ ಮಂಜುನಾಥ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಪಾರ್ಕ್ಗಳ ಒತ್ತುವರಿ ತೆರವು ಮಾಡದ ಬಿಡಿಎ ವಿರುದ್ಧ ಪೀಠ ಗರಂ ಆಯಿತು. ವರದಿ ಪ್ರಕಾರ ಲೇಔಟ್ನ 39 ಪಾರ್ಕ್ಗಳ ಪೈಕಿ ಬಹುತೇಕ ಪಾರ್ಕ್ಗಳು ಒತ್ತುವರಿಯಾಗಿವೆ. ಉದ್ಯಾನವದಲ್ಲಿ ಕಟ್ಟಡ ಕಟ್ಟಲು ಅನುಮತಿ ಕೊಟ್ಟವರು ಯಾರು? ಅಕ್ರಮ ಕಟ್ಟಡಕ್ಕೆ ಹೊಣೆ ಯಾರು? ಕಟ್ಟಡ ನಿರ್ಮಿಸುವಾಗ ಕಣ್ಮುಚ್ಚಿ ಕುಳಿತಿದ್ರಾ? ಎಂದು ಬಿಡಿಎಗೆ ತರಾಟೆಗೆ ತೆಗೆದುಕೊಂಡಿತು. ಅಲ್ಲದೇ, ಬಿಡಿಎ ಆಯುಕ್ತರನ್ನು ಅಮಾನತುಪಡಿಸುವುದಾಗಿ ಖಡಕ್ ಎಚ್ಚರಿಕೆ ನೀಡಿತು.
ಬಿಡಿಎ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಪೊಲೀಸ್ ಭದ್ರತೆಯಲ್ಲಿ ಒತ್ತುವರಿ ತೆರವುಗೊಳಿಸಲಾಗುವುದು. ಆದ್ದರಿಂದ, ಒತ್ತುವರಿ ತೆರವುಗೊಳಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠ, ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಂಡ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು 2022 ರ ಫೆಬ್ರವರಿ ಮೊದಲ ವಾರಕ್ಕೆ ಮುಂದೂಡಿತು.