ಬೆಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯವನ್ನು ಸುರಿಯುತ್ತಿರುವ ಹಿನ್ನೆಲೆ ಪಾಲಿಕೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಮಾರ್ಚ್ 5ರಂದು ನಡೆಯುವ ವಿಚಾರಣೆಗೆ ಬಿಬಿಎಂಪಿ ಆಯುಕ್ತರು ಖುದ್ದು ಹಾಜರಾಗುವಂತೆ ತಾಕೀತು ಮಾಡಿದೆ.
ಅಲ್ಲದೆ, ಬಿಬಿಎಂಪಿ ಅಧಿಕಾರಿಗಳನ್ನು ನ್ಯಾಯಾಲಯದ ಅಂಗಳದಿಂದಲೇ ಜೈಲಿಗೆ ಕಳುಹಿಸಲಾಗುವುದು. ಜೈಲಿಗೆ ಹೋಗಲು ಗಂಟು ಮೂಟೆ ಕಟ್ಟಿಕೊಂಡು ಸಿದ್ಧವಾಗಿ ಬರುವಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಪಾಲಿಕೆ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿದೆ.
ಓದಿ: ದಿಗ್ಗಜ ಕವಿಯನ್ನು ಕಳೆದುಕೊಂಡಿದ್ದೇವೆ.. ಚೆನ್ನವೀರ ಕಣವಿ ನಿಧನಕ್ಕೆ ಕೇಂದ್ರ ಸಚಿವ ಜೋಶಿ ಸಂತಾಪ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ನಗರದ ತಾಜ್ಯ ಸುರಿಯದಂತೆ ಹೈಕೋರ್ಟ್ 2021ರ ಮಾರ್ಚ್ 6ರಂದು ಬಿಬಿಎಂಪಿಗೆ ಆದೇಶಿಸಿದೆ. ಹಾಗಿದ್ದರೂ, ಪಾಲಿಕೆ ಮಿಟ್ಟಗಾನಹಳ್ಳಿಯಲ್ಲಿ ಕ್ವಾರಿಯಲ್ಲಿ ತ್ಯಾಜ್ಯ ಸುರಿಯುತ್ತಿದೆ ಎಂದು ತಿಳಿಸಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು, ತ್ಯಾಜ್ಯ ಸುರಿಯಲು ಮಂಡಳಿಯಿಂದ ಪಾಲಿಕೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ, ಮಾರ್ಚ್ 6ರಂದು ನ್ಯಾಯಾಲಯ ನೀಡಿರುವ ಆದೇಶವನ್ನು ಬಿಬಿಎಂಪಿ ಉಲ್ಲಂಘನೆ ಮಾಡಿರುವುದು ಸ್ಪಷ್ಟ. ಇದು ಸಂಪೂರ್ಣವಾಗಿ ನ್ಯಾಯಾಂಗ ನಿಂದನೆ. ಈ ಕುರಿತಂತೆ ಮುಂದಿನ ವಿಚಾರಣೆಗೆ ಬಿಬಿಎಂಪಿ ಆಯುಕ್ತರು ಹಾಜರಾಗಿ ವಿವರಣೆ ನೀಡಬೇಕು. ನ್ಯಾಯಾಯವು ತಮ್ಮನ್ನು ಜೈಲಿಗೆ ಕಳುಹಿಸಲಿ ಎಂಬಂತೆ ಕೆಲ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದಿತು.
ಓದಿ:ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ರಾಷ್ಟ್ರಧ್ವಜ ಹಾರಿಸಿದ ಪಕ್ಷ ಬಿಜೆಪಿ: ಸಚಿವ ಮಾಧುಸ್ವಾಮಿ
ಬಳಿಕ ಪ್ರಕರಣ ಸಂಬಂಧ ಮುಂದಿನ ವಿಚಾರಣೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರು ಖುದ್ದಾಗಿ ಹಾಜರಾಗಬೇಕು. ಹೈಕೋರ್ಟ್ ನಿರ್ಬಂಧ ಆದೇಶದ ಹೊರತಾಗಿಯೂ ಯಾರ ಆದೇಶದ ಮೇರೆಗೆ ಘನತ್ಯಾಜ್ಯವನ್ನು ಕ್ವಾರಿ ಪ್ರದೇಶದಲ್ಲಿ ಸುರಿಯಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಮುಖ್ಯ ಆಯುಕ್ತರು ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿತು.
ಇದೇ ವೇಳೆ, ಜೈಲಿಗೆ ಹೋಗಲು ಬ್ಯಾಗ್ ಹಾಗು ಅಗತ್ಯ ವಸ್ತುಗಳೊಂದಿಗೆ ಸಿದ್ಧರಾಗಿ ಬರುವಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ. ಅಧಿಕಾರಿಗಳನ್ನು ಈ ಬಾರಿ ಖಂಡಿತವಾಗಿ ನ್ಯಾಯಾಲಯದ ಅಂಗಳದಿಂದಲೇ ಜೈಲಿಗೆ ಕಳುಹಿಸಲಾಗುವುದು. ಕೋರ್ಟ್ ಆದೇಶ ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದನ್ನು ಅವರಿಗೆ ಅರಿವಾಗಬೇಕು ಎಂದು ಕಟುವಾಗಿ ಹೇಳಿತು.