ಬೆಂಗಳೂರು : ಸಂಚಾರ ದಟ್ಟಣೆ ಮಧ್ಯೆಯೂ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ‘ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ’ ಜಾರಿಗೆ ಕರೆಯಲಾಗಿದ್ದ 1,800 ಕೋಟಿ ರೂ. ಮೊತ್ತದ ಟೆಂಡರ್ನ್ನು ಆರೋಗ್ಯ ಸಚಿವರ ಸೂಚನೆ ಮೇರೆಗೆ ರದ್ದುಪಡಿಸಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿಯಲ್ಲಿ ಆರೋಗ್ಯ ಸಚಿವರನ್ನೂ ಪ್ರತಿವಾದಿಯಾಗಿ ಮಾಡುವ ಎಚ್ಚರಿಕೆ ನೀಡಿದೆ.
ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ನಿರ್ದೇಶನದ ಮೇರೆಗೆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿದ್ದಕ್ಕೆ ಆರೋಗ್ಯ ಇಲಾಖೆ ಕಾರ್ಯದರ್ಶಿ ನೀಡಿದ್ದ ಲಿಖಿತ ಸಮರ್ಥನೆ ಪರಿಶೀಲಿಸಿದ ಪೀಠ, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಓದಿ : ವಿಧಾನ ಪರಿಷತ್ ಸಭಾಪತಿ ಚುನಾವಣೆ ದಿನಾಂಕ ಪ್ರಕಟಿಸಿದ ರಾಜ್ಯಪಾಲರು
ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಿದ್ದ ಕಾರಣಕ್ಕೆ ಆರೋಗ್ಯ ಸಚಿವರ ಸೂಚನೆ ಮೇರೆಗೆ ಟೆಂಡರ್ ರದ್ದುಪಡಿಸಲಾಗಿದೆ ಎಂದಿದ್ದೀರಿ. ಅಲ್ಲದೆ, ತಜ್ಞರ ಸಲಹೆ ಪಡೆದಿರುವುದಾಗಿ ಹೇಳಿದ್ದೀರಿ. ಆದರೆ, ಟೆಂಡರ್ ರದ್ದುಪಡಿಸಲು ಸಲಹೆ ನೀಡಿದ ತಜ್ಞರು ಯಾರು..? ಅವರು ನೀಡಿದ ಸಲಹೆ ಏನು..? ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ನೀವು ನೀಡಿರುವ ಸಮರ್ಥನೆಗಳಿಗೆ ಆಧಾರವೇನು. ಯೋಜನೆ ವಿಳಂಬ ಮಾಡಲಿಕ್ಕಾಗಿಯೇ ಇಂತಹ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.
ಅಲ್ಲದೆ, ಟೆಂಡರ್ ಪ್ರಕ್ರಿಯೆ ವಿಚಾರದಲ್ಲಿ ಹೈಕೋರ್ಟ್ ಮೇಲ್ವಿಚಾರಣೆ ಮಾಡುತ್ತಿದೆ ಎಂದು ನ್ಯಾಯಾಲಯ ಹಲವು ಬಾರಿ ಹೇಳಿತ್ತು. ಸರ್ಕಾರ ಕೂಡ ಶೀಘ್ರವಾಗಿ ಟೆಂಡರ್ ಅಂತಿಮಗೊಳಿಸುವ ಭರವಸೆ ನೀಡಿತ್ತು. ಆದರೆ, ಈ ವಿಚಾರವಾಗಿ ಕೋರ್ಟ್ ಗಮನಕ್ಕೆ ತರದೆ ಟೆಂಡರ್ ರದ್ದುಪಡಿಸಲಾಗಿದೆ. ಕೋರ್ಟ್ ವಿಚಾರಣೆ ಬಗ್ಗೆ ಆರೋಗ್ಯ ಸಚಿವರಿಗೆ ಮಾಹಿತಿ ಇರಲಿಲ್ಲವೇ ಎಂದು ಕಟುವಾಗಿ ಪ್ರಶ್ನಿಸಿದ ಪೀಠ, ಸರ್ಕಾರದ ಈ ಕ್ರಮ ನ್ಯಾಯಾಂಗ ನಿಂದನೆಯಾಗಲಿದ್ದು, ಸಚಿವರನ್ನು ಪ್ರತಿವಾದಿಯಾಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಹಾಗೆಯೇ ಸರ್ಕಾರ ಟೆಂಡರ್ ರದ್ದುಪಡಿಸಿದ್ದಕ್ಕೆ ಸೂಕ್ತ ವಿವರಣೆ ನೀಡಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿತು.