ಬೆಂಗಳೂರು : ಕಬ್ಬನ್ ಪಾರ್ಕ್ ಒಳಗೆ ನಾಯಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಉದ್ಯಾನಗಳು ಮತ್ತು ರಸ್ತೆಗಳ ಮೇಲೆ ನಾಯಿ ಹಾಗೂ ಜಾನುವಾರುಗಳನ್ನು ಬಿಡುವುದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿದೆ.
ಕಬ್ಬನ್ ಪಾರ್ಕ್ಗೆ ಜಾಗದಲ್ಲಿ ವಿವಿಧ ಸಂಸ್ಥೆಗಳು ಅನಧಿಕೃತವಾಗಿ ಕಟ್ಟಡ ನಿರ್ಮಿಸಿವೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕಬ್ಬನ್ ಪಾರ್ಕ್ ಒಳಗೆ ನಾಯಿಗಳನ್ನು ಬಿಡುತ್ತಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಹೇಗೆ ಈ ನಾಯಿಗಳ ಪ್ರವೇಶಕ್ಕೆ ಅನುಮತಿಸಲಾಗಿದೆ? ಎಂದು ಸಿಜೆ ಪ್ರಶ್ನಿಸಿದರು. ಅಲ್ಲದೇ, ಸಾಕು ನಾಯಿಗಳ ಮಾಲೀಕರು ಪಾರ್ಕ್ ಒಳಗೆ ಕರೆ ತಂದಾಗ ಸ್ವತಂತ್ರವಾಗಿ ಬಿಟ್ಟುಬಿಡುತ್ತಾರೆ. ಇನ್ನೂ ಕೆಲವರು ತಮ್ಮ ವಾಹನಗಳಲ್ಲಿ ಆಹಾರ ತಂದು ನಾಯಿಗಳಿಗೆ ಹಾಕುತ್ತಾರೆ. ಅವುಗಳ ಮುಂದೆ ಹೋದರೆ ನಾಯಿಗಳು ವ್ಯಗ್ರವಾಗಿ ವರ್ತಿಸುವುದಲ್ಲದೆ, ಜನರನ್ನು ಬೆನ್ನಟ್ಟುತ್ತವೆ. ವಾಯು ವಿಹಾರಕ್ಕೆ ಬರುವವರೆಗೆ ಇದು ನಿಜಕ್ಕೂ ಅಪಾಯಕಾರಿ ಎಂದರು.
ಅಲ್ಲದೆ, ಕಬ್ಬನ್ ಪಾರ್ಕ್‌ನಲ್ಲಿಯೇ ನಾಯಿಗಳು ಮಲ ವಿರ್ಸಜನೆ ಮಾಡುತ್ತಿದ್ದು, ಪ್ರತಿದಿನ ಅದನ್ನು ಸ್ವಚ್ಛಗೊಳಿಸದಿದ್ದರೆ ಓಡಾಡಲೂ ಸಾಧ್ಯವಾಗುವುದಿಲ್ಲ. ಇದು ಸಾಲದೆಂಬಂತೆ ಜಾನುವಾರುಗಳನ್ನೂ ರಸ್ತೆಗಳ ಮೇಲೆ ಬಿಡಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ನಾಯಿಗಳನ್ನು ರಸ್ತೆಗಳಿಗೆ ಕರೆತಂದು ಮಲ-ಮೂತ್ರ ವಿಸರ್ಜನೆ ಮಾಡಿಸುವುದನ್ನು ತಡೆಯಬೇಕು. ಈ ಎಲ್ಲಾ ವಿಚಾರಗಳಲ್ಲಿ ಬಿಬಿಎಂಪಿ ತಾನಾಗಿಯೇ ಕ್ರಮ ಜರುಗಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಕ್ರಮ ಜರುಗಿಸಲು ಆದೇಶಿಸಬೇಕಾಗುತ್ತದೆ ಎಂದು ಮೌಖಿಕವಾಗಿ ಎಚ್ಚರಿಸಿದರು.
ಯೂರೋಪ್ ಸ್ಪಚ್ಛತೆ ಕೊಂಡಾಡಿದ ಸಿಜೆ:
ನಾಯಿಗಳಿಂದ ಉದ್ಯಾನ ಗಲೀಜುಗೊಳ್ಳುತ್ತಿರುವ ಕುರಿತು ಜನರ ಮನಸ್ಥಿತಿಗೆ ಉದಾಹರಣೆ ನೀಡಿದ ಸಿಜೆ, ನಾನು ಯುರೋಪ್‌ಗೆ ಹೋಗಿದ್ದಾದ ಹೋಟೆಲ್ ಕಿಟಕಿ ಪಕ್ಕ ನಿಂತಿದ್ದೆ. ಈ ಸಮಯದಲ್ಲಿ ಎದುರಿನ ರಸ್ತೆಗೆ ನಾಯಿಯೊಂದಿಗೆ ವ್ಯಕ್ತಿಯೊಬ್ಬರು ಬಂದರು. ರಸ್ತೆ ಮಧ್ಯೆಯೇ ನಾಯಿ ಮಲ ವಿಸರ್ಜಿಸಿತು. ಕೂಡಲೇ ಆ ವ್ಯಕ್ತಿ ತನ್ನ ಜೇಬಿನಿಂದ ಪ್ಲಾಸ್ಟಿಕ್ ಕವರ್ ತೆಗೆದು ನಾಯಿಯ ಮಲ ಬಾಚಿ ಕಸದ ಬುಟ್ಟಿಗೆ ಹಾಕಿದರು. ಅದನ್ನು ನೋಡಿ ಎಷ್ಟು ಜವಾಬ್ದಾರಿಯುತ ಜನರಿದ್ದಾರೆ ಎಂದುಕೊಂಡೆ. ಆದರೆ, ನಮ್ಮಲ್ಲಿ ಹೆಚ್ಚು ಓದಿಕೊಂಡವರೇ ಸಾಕು ನಾಯಿಗಳನ್ನು ರಸ್ತೆಗೆ ಕರೆತಂದು ಮಲ ವಿರ್ಸಜನೆ ಮಾಡಿಸುತ್ತಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಂಗಳೂರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ನ್ಯಾಯವಾದಿಯ ಪತ್ನಿ ಸಹಿತ ಮತ್ತೋರ್ವನ ಬಂಧನ, ಜಾಮೀನು