ಬೆಂಗಳೂರು: ಹಣಕ್ಕಾಗಿ ಸ್ನೇಹಿತನನ್ನು ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಮುಂಬೈ ಮೂಲದ ಇಬ್ಬರು ಯುವತಿಯರು ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ತ್ವರಿತಗತಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಆರೋಪಿಗಳಾದ ಜಾರ್ಖಾಂಡ್‌ನ ರೋಹಿತ್ ಕುಮಾರ್, ಮುಂಬೈ ಮೂಲದ ಶಿವಾನಿ ಠಾಕೂರ್, ಪ್ರೀತಿ ರಾಜ್ ಮತ್ತು ಬಿಹಾರದ ವಾರೀಶ್ ಪ್ರತ್ಯೇಕವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ, ನಾಲ್ವರಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದೆ.
ಅಲ್ಲದೆ, ಪ್ರಕರಣದ ಘಟನೆ ಶಿವಾನಿ ಮತ್ತು ರೋಹಿತ್ ಕುಮಾರ್ ಮನೆಯಲ್ಲಿ ನಡೆದಿದೆ. ಮೊದಲನೆ ಆರೋಪಿಯ ಬಟ್ಟೆಗಳು ಮತ್ತು ಆತನ ಉಳಿದುಕೊಂಡ ಲಾಡ್ಜ್‌ನ ರಸೀದಿಗಳು ರೋಹಿತ್ ಮನೆಯಲ್ಲೇ ದೊರೆತಿದೆ.ಅವರೆಲ್ಲಾ ಒಟ್ಟಾಗಿ ಸೇರಿ ಮೃತನ ತಂದೆಯಿಂದ ಹಣ ವಸೂಲಿ ಮಾಡಲು ಈ ಅಪರಾಧ ಕೃತ್ಯ ಮಾಡಿರುವುದಿಲ್ಲ. ಎಸ್ಟೀಮ್ ಮಾಲ್‌ನ ಸಿಸಿಟಿವಿ ದೃಶ್ಯಾವಳಿ ಪ್ರಕಾರ 2011ರ ಜ.14ರಂದು ಮೊದಲಿಂದಲೂ ಶಿವಾನಿ ಮತ್ತು ಪ್ರೀತಿ ರಾಜ್ ತುಷಾರ್ ಜತೆಗೆ ಪರಿಚಯವಿತ್ತು ಎಂಬುದು ಸಾಬೀತಾಗಿದೆ ಎಂದು ತಿಳಿಸಿದೆ.ಈ ನಾಲ್ವರು ಆರೋಪಿಗಳು ಜತೆಗೂಡದಿದ್ದರೆ ತುಷಾರ್ ಅನ್ನು ಅಪಹರಿಸಿ ಕೊಲೆ ಮಾಡಲಾಗುತ್ತಿರಲಿಲ್ಲ.
ಆರೋಪಿಗಳು ಕೇವಲ ಕೊಲೆ ಮಾಡಿಲ್ಲ. ಮೃತದೇಹವನ್ನು ವಿಲೇವಾರಿ ಮಾಡಿ ಸಾಕ್ಷ್ಯ ನಾಶಕ್ಕೂ ಯತ್ನಿಸಿದ್ದಾರೆ. ಲಭ್ಯವಿರುವ ದಾಖಲೆ ಗಮನಿಸಿದರೆ ಇಬ್ಬರು ಯುವತಿಯರು ಮೃತನೊಂದಿಗೆ ಸ್ನೇಹ ಬೆಳೆಸಿ ಹತ್ತಿರವಾಗಿದ್ದಾರೆ. ರೋಹಿತ್ ಮತ್ತು ವಾರೀಶ್ ಜೊತೆಗೂಡಿ ತುಷಾರ್ ಅನ್ನು ಅಪಹರಿಸಿದ್ದಾರೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಜತೆಗೆ, ವಾರಿಶ್ ಸೂಚನೆ ಮೇರೆಗೆ ರೋಹಿತ್ ಮೃತನ ತಂದೆಯಿಂದ ಹಣ ಪಡೆಯಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾನೆ. ಈ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹೇಳಿಕೆ ಆಧರಿಸಿ ಮೃತದೇವನ್ನು ಪತ್ತೆ ಹಚ್ಚಲಾಗಿತ್ತು. ಆದ್ದರಿಂದ ಎಲ್ಲರೂ ಪ್ರಕರಣಕ್ಕೆ ಒಳಸಂಚು ರೂಪಿಸಿದ್ದ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ಅದನ್ನು ಪರಿಗಣಿಸಿ ನಾಲ್ವರಿಗೆ ಆರೋಪಿಗೆ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಎಲ್ಲ ಸಾಕ್ಷ್ಯಧಾರಗಳನ್ನು ಮರು ಪರಿಶೀಲಿಸಿದರೆ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವ ಅಗತ್ಯ ಕಂಡುಬರುತ್ತಿಲ್ಲ ಎಂದು ಅಭೀಪ್ರಾಯಪಟ್ಟು ಮೇಲ್ಮನವಿಯನ್ನು ವಜಾಗೊಳಿಸಿದೆ.ಜತೆಗೆ, 2014ರ ಅ.31ರಂದು ಮೇಲ್ಮನವಿದಾರನನ್ನು ದೋಷಿಗಳಾಗಿ ತೀರ್ಮಾನಿಸಿದ ಮತ್ತು 2014ರ ನ.6ರಂದು ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಪ್ರಕರಣದ ಹಿನ್ನೆಲೆ ಏನು? ವಾರಿಶ್ ಮತ್ತು ತುಷಾರ್ ರಾಜಸ್ಥಾನದಲ್ಲಿ ಒಟ್ಟಿಗೆ ಓದಿದ್ದರು. ಎಂಜಿನಿಯರಿಂಗ್ ವ್ಯಾಸಂಗ ಮಾಡಲು ತುಷಾರ್ ಬೆಂಗಳೂರಿಗೆ ಬಂದಿದ್ದ. ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿರುವ ಹಿನ್ನೆಲೆಯಲ್ಲಿ ತುಷಾರ್‌ನನ್ನು ಅಪಹರಿಸಿ ಹಣಕ್ಕೆ ವಸೂಲಿ ಮಾಡಲು ಯೋಚಿಸಿ, ವಾರಿಶ್ ಬೆಂಗಳೂರಿಗೆ ಬಂದಿದ್ದನು. ನಂತರ ಎಂಜಿನಿಯರಿಂಗ್ ಕೋರ್ಸ್ ಅನ್ನು ಅರ್ಧಕ್ಕೆ ಬಿಟ್ಟು ನಗರದಲ್ಲಿ ಉದ್ಯೋಗ ಮಾಡುತ್ತಿದ್ದ ತಮ್ಮ ಸಂಬಂಧಿಕರಾದ ಪ್ರೀತಿ ಮತ್ತು ಶಿವಾನಿಯನ್ನು ತುಷಾರ್‌ಗೆ ವಾರೀಶ್ ಪರಿಚಯ ಮಾಡಿಕೊಟ್ಟಿದ್ದನು.2011ರ ಜ.14ರಂದು ತುಷಾರ್ ಕಾಣೆಯಾಗಿದ್ದ. ಇದಾದ ಏಳು ದಿನಗಳ ನಂತರ ಆತನ ಮೃತ ದೇಹ ಯಲಹಂಕ ಬಳಿಯ ವೀರಸಾಗರ ರಸ್ತೆಯ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿತ್ತು.
ತುಷಾರ್ ಮತ್ತು ಆಯುಷ್ಮಾನ್ ನಗರದಲ್ಲಿ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.ತುಷಾರ್ ಕೊನೆಯದಾಗಿ ಶಿವಾನಿ ಠಾಕೂರ್ ಮತ್ತು ಪ್ರೀತಿ ರಾಜ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಜ.14ರಂದು ತುಷಾರ್ ಸ್ನೇಹಿತ ಆಯುಷ್ಮಾನ್ ಲಾಲ್ ರೊಂದಿಗೆ ನಗರದ ಎಸ್ಟೀಮ್ ಮಾಲ್‌ಗೆ ಹೋಗಿದ್ದನು. ಆ ವೇಳೆ ತುಷಾರ್ ತನ್ನ ಗೆಳತಿಯರೂ ಅದ ಪ್ರಕರಣದ ನಾಲ್ಕನೇ ಆರೋಪಿ ಪ್ರೀತಿ ರಾಜ್ ಮತ್ತು ಮೂರನೇ ಆರೋಪಿ ಶಿವಾನಿ ಠಾಕೂರ್ ಅನ್ನು ಆಯುಷ್ಮಾನ್ ಲಾಲ್‌ಗೆ ಪರಿಚಯ ಮಾಡಿಕೊಟ್ಟಿದ್ದನು. ಮಾಲ್‌ನಲ್ಲಿ ಊಟ ಮುಗಿಸಿ ಹೊರಬಂದ ವೇಳೆ ತಮ್ಮನ್ನು ಮನೆಯವರೆಗೆ ಬಿಡುವಂತೆ ತುಷಾರ್‌ಗೆ ಶಿವಾನಿ ಮತ್ತು ಪ್ರೀತಿ ಕೋರಿದ್ದರು. ಆಗ ಆ ಮೂರು ಜನ ಆರ್.ಟಿ. ನಗರದ ಮನೆಗೆ ಆಟೋ ಹಿಡಿದು ಹೊರಟರು.
ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ್ದ ಆಯುಷ್ಮಾನ್ ಲಾಲ್, ಆಟೋ ಯಲಹಂಕ ಕಡೆಗೆ ಹೋಗುವುದನ್ನು ಗಮನಿಸಿ ಕಾಲೇಜಿಗೆ ವಾಪಸ್ ಬಂದು ಕಾಯುತ್ತಿದ್ದನು. ಆದರೆ, ಆಯುಷ್ಮಾನ್‌ಗೆ ಮೊಬೈಲ್‌ಗೆ ತುಷಾರ್‌ನಿಂದ ‘ನಾನು ಹುಡಗಿಯರೊಂದಿಗೆ ಇದ್ದೇನೆ. ಮದ್ಯವನ್ನು ತಂದಿದ್ದೇನೆ. ಇಲ್ಲಿಯೇ ಸ್ವಲ್ಪ ಹೊತ್ತು ಇರುತ್ತೇನೆ’ ಎಂಬ ಮಸೇಜ್ ಬಂದಿತ್ತು. ಇದರಿಂದ ಆಯುಷ್ಮಾನ್ ತನ್ನ ರೂಮಿಗೆ ಹೋಗಿದ್ದನು. ಜ.16ರಂದು ತುಷಾರ್ ಮೊಬೈಲ್‌ನಿಂದಲೇ ಆತನ ತಂದೆಗೆ ಕರೆ ಮಾಡಿದ ಆರೋಪಿಗಳು, ನಿಮ್ಮ ಮಗನನ್ನು ಅಪಹರಣ ಮಾಡಿದ್ದು, 10 ಲಕ್ಷ ನೀಡಿ ಬಿಡಿಸಿಕೊಂಡು ಹೋಗುವಂತೆ ಸೂಚಿಸಿದ್ದರು. ಇದರಿಂದ ತುಷಾರ್ ತಂದೆ ಬಿಹಾರದಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದರು.
10 ಲಕ್ಷ ಹಣ ಪಡೆಯಲು ರೈಲ್ವೆ ನಿಲ್ದಾಣಕ್ಕೆ ಬಂದ ಎರಡನೇ ಆರೋಪಿ ರೋಹಿತ್ ಕುಮಾರ್ ಅನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ತುಷಾರ್ ತಂದೆ ನೀಡುವ ಹಣವನ್ನು ತೆಗೆದುಕೊಂಡು ಬರುವಂತೆ ತನಗೆ ವಾರೀಶ್ ತಿಳಿಸಿದ್ದ ಎಂದು ಆತ ತಿಳಿಸಿದ್ದರು. ಆ ಮಾಹಿತಿ ಆಧರಿಸಿದ ಪೊಲೀಸರು, ಚಿಕ್ಕಪೇಟೆಯ ಲಾಡ್ಜ್‌ವೊಂದರಲ್ಲಿ ವಾರೀಶ್‌ನನ್ನು ಬಂಧಿಸಿದ್ದರು. ಜ.14ರಂದೇ ತುಷಾರ್ ಅವರನ್ನು ಅಪಹರಿಸಿ, ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಆತ ನೀಡಿದ ಮಾಹಿತಿ ಮೇರೆಗೆ ವೀರಸಾಗರ ರಸ್ತೆಯ ನೀಲಗಿರಿ ತೋಟದಲ್ಲಿ ಮೃತ ದೇಹವನ್ನು ಪತ್ತೆ ಹಚ್ಚಲಾಗಿತ್ತು. ನಂತರ ಪೊಲೀಸರು ಶಿವಾನಿ ಮತ್ತು ಪ್ರೀತಿಯನ್ನು ಬಂಧಿಸಿದ್ದರು.
ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳೇ ಹಣಕ್ಕಾಗಿ ತುಷಾರ್ ಅನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಪ್ರಾಸಿಕ್ಯೂಷನ್ ಸಂಶಯತೀತವಾಗಿ ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದ ಬೆಂಗಳೂರಿನ 15ನೇ ತ್ವರಿತಗತಿ ನ್ಯಾಯಾಲಯ ನಾಲ್ವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪು ರದ್ದು ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂಓದಿ:ಎಲ್ಲರಿಗೂ ಇರುವ ಕಾನೂನಿನ ಮೂಲಕವೇ ಪ್ರದೀಪ್ ಆತ್ಮಹತ್ಯೆಯ ತನಿಖೆಯಾಗಲಿ: ಡಿಕೆಶಿ