ಬೆಂಗಳೂರು : ಪೋಕ್ಸೋ ಪ್ರಕರಣಗಳಲ್ಲಿ "ವಿಚಾರಣೆ ವಿಳಂಬವಾದರೆ ಆರೋಪಿಗೆ ಜಾಮೀನು ನೀಡಬೇಕು" ಹಾಗೂ "ವಿಚಾರಣೆ ವಿಳಂಬವಾಗುವುದು ಜಾಮೀನಿಗೆ ಆಧಾರವಾಗದು" ಎಂದು ಹೈಕೋರ್ಟ್ನ ಎರಡು ಪ್ರತ್ಯೇಕ ಪೀಠಗಳು ಭಿನ್ನ ತೀರ್ಪು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕಾನೂನಾತ್ಮಕ ಸಮಸ್ಯೆಯನ್ನು ಬಗೆಹರಿಸಲು ವಿಸ್ತೃತ ಅಥವಾ ಸಾಂವಿಧಾನಿಕ ಪೀಠ ರಚಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪೋಕ್ಸೋ ಪ್ರಕರಣದಲ್ಲಿ ಜಾಮೀನು ಕೋರಿ ಉಡುಪಿಯ ಹನುಮಂತ ಮೊಗವೀರ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ. ಬಿ. ಎ. ಪಾಟೀಲ್ ಅವರಿದ್ದ ಏಕ ಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠ ತನ್ನ ಆದೇಶದಲ್ಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012 (ಪೋಕ್ಸೋ) ನಿಯಮಗಳ ಪ್ರಕಾರ ವಿಶೇಷ ನ್ಯಾಯಾಲಯ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪ ಪರಿಗಣನೆಗೆ ತೆಗೆದುಕೊಂಡ 1 ತಿಂಗಳಲ್ಲಿ ಸಂತ್ರಸ್ತೆಯ ಸಾಕ್ಷ್ಯ ದಾಖಲಿಸಿಕೊಳ್ಳಬೇಕು. ಹಾಗೆಯೇ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕು.
ಆದರೆ, ಈ ಎರಡು ನಿಯಮಗಳು ಪಾಲನೆ ಆಗದ ಸಂದರ್ಭದಲ್ಲಿ ಆರೋಪಿಗೆ ಜಾಮೀನು ನೀಡಬೇಕೋ ಅಥವಾ ನೀಡಬಾರದಾ ಎಂಬ ಕುರಿತು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಪೀಠಗಳು ಭಿನ್ನ ಆದೇಶ ನೀಡಿವೆ. ಹೀಗಾಗಿ ಈ ಸಮಸ್ಯೆ ಬಗೆಹರಿಸಲು ವಿಸ್ತೃತ ಅಥವಾ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾ. ಬಿ.ಎ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ, ಅಪರಾಧ ದಂಡ ಪ್ರಕ್ರಿಯ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 164ರ ಅಡಿ ದಾಖಲಿಸಿದ ಸಂತ್ರಸ್ತೆಯ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಬೇಕೇ, ಬೇಡವೇ ಎಂಬುದನ್ನು ಕೂಡ ವಿಸ್ತೃತವಾಗಿ ಚರ್ಚಿಸುವ ಅಗತ್ಯವಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.