ಬೆಂಗಳೂರು: ರಾಜ್ಯದ ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 2020-21ನೇ ಸಾಲಿನ ವ್ಯತ್ಯಸ್ಥ ತುಟ್ಟಿಭತ್ಯೆ (ವಿಡಿಎ) ಏರಿಕೆಯ ಮೊತ್ತ ಪಾವತಿಸುವುದನ್ನು ಮುಂದೂಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಕಾನೂನು ಮಾನ್ಯತೆ ಕುರಿತು ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಹೇಳಿದೆ.
ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳ ನೌಕರರ ಒಕ್ಕೂಟ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮತ್ತಿತರ ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿಗಳಲ್ಲಿ ಸರ್ಕಾರದ ಆದೇಶದ ಕಾನೂನು ಮಾನ್ಯತೆ ಮತ್ತು ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ಹಾಗಾಗಿ ಈ ವಿಚಾರವನ್ನು ನ್ಯಾಯಾಲಯ ಪರಿಗಣಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಮೇ 25ಕ್ಕೆ ನಿಗದಿಪಡಿಸಿದೆ.
ಪ್ರಕರಣದ ಹಿನ್ನೆಲೆ:
2020-21ನೇ ಸಾಲಿನ ವ್ಯತಸ್ಥ ತುಟ್ಟಿಭತ್ಯೆ ಪಾವತಿಯನ್ನು 2021ರ ಮಾ. 31ರವರೆಗೆ ಮುಂದೂಡಿ 2020ರ ಜುಲೈ 20ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಆದೇಶ ಮೇಲ್ನೋಟಕ್ಕೆ ಕಾನೂನು ಬಾಹಿರವಾಗಿದೆ. ಕಾಯ್ದೆಯಡಿ ಇದನ್ನು ಅನುಮತಿಸಲಾಗುವುದಿಲ್ಲ. ವ್ಯತಸ್ಥ ತುಟ್ಟಿಭತ್ಯೆ ಕನಿಷ್ಠ ವೇತನದ ಅವಿಭಾಜ್ಯ ಅಂಗ.
ಕನಿಷ್ಠ ಕೂಲಿ ಕಾಯ್ದೆ-1948ರ ಸೆಕ್ಷನ್ 2 ವ್ಯತ್ಯಸ್ಥ ತುಟ್ಟಿಭತ್ಯೆಗೆ ಅನ್ವಯವಾಗುವುದಿಲ್ಲ. ಕನಿಷ್ಠ ವೇತನ ನಿಗದಿಪಡಿಸುವುದು ಶಾಸನಾತ್ಮಕ ಕಾರ್ಯವಾಗಿದ್ದು, ಕಾರ್ಯಕಾರಿ ಆದೇಶದ ಮೂಲಕ ಅದನ್ನು ತಡೆ ಹಿಡಿಯಲು ಅಥವಾ ಮುಂದೂಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, 2020ರ ನ. 11ರಂದು ಸರ್ಕಾರದ ಆದೇಶಕ್ಕೆ ತಡೆ ಕೂಡ ನೀಡಿದೆ.