ಬೆಂಗಳೂರು: ಕೊಡಗು ಜಿಲ್ಲೆಯ ಪುರಾತನ ಮಡಿಕೇರಿ ಕೋಟೆ ಕಟ್ಟಡದ ದುರಸ್ತಿ ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿದೆ.
ಐತಿಹಾಸಿಕ ಮಡಿಕೇರಿ ಕೋಟೆಯನ್ನು ಸರಿಯಾಗಿ ದುರಸ್ತಿ ಮಾಡುತ್ತಿಲ್ಲ ಮತ್ತು ಕಾಮಗಾರಿ ಅತ್ಯಂತ ಕಳಪೆಯಿಂದ ಕೂಡಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸ್ಥಳೀಯ ನಿವಾಸಿ ಜೆ.ಎಸ್.ವಿರೂಪಾಕ್ಷಯ್ಯ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿ, ಕೋಟೆ ದುರಸ್ತಿ ಕಾಮಗಾರಿಗೆ ಒಟ್ಟು 8.20 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 53 ಲಕ್ಷ ವೆಚ್ಚದ ಪ್ರಾಥಮಿಕ ಹಂತದ ಕಾಮಗಾರಿ ಇತ್ತೀಚೆಗಷ್ಟೇ ಶುರುವಾಗಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರ ಪರ ವಕೀಲ ಎನ್.ರವೀಂದ್ರನಾಥ್ ಕಾಮತ್ ವಾದಿಸಿ, ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಲು ಗಡುವು ನೀಡಿದ್ದರೂ ಈವರೆಗೆ ಶೇ. 40ರಷ್ಟು ಕಾಮಗಾರಿ ನಡೆದಿಲ್ಲ. ಕಾಮಗಾರಿಯೂ ಕಳಪೆಯಾಗಿದ್ದು, ಕೋಟೆ ಕಟ್ಟಡದ ಮಾಳಿಗೆಗೆ ಹೆಂಚಿನ ಬದಲು ಜಿಂಕ್ ಶೀಟ್ ಹಾಗೂ ನೀಲಗಿರಿಯ ಮರದ ತುಂಡುಗಳನ್ನು ಅಳವಡಿಸಲಾಗುತ್ತಿದೆ. ಅದರ ಆಯಸ್ಸು ಹೆಚ್ಚೆಂದರೆ 10 ವರ್ಷ ಇರಬಹುದು. ದುರಸ್ತಿ ಮಾಡಿದ ಮೇಲೆ 100 ವರ್ಷವಾದರೂ ಬಾಳಿಕೆ ಬರಬೇಕು. ಆದರೆ ಕಾಮಗಾರಿ ವಿಪರೀತ ಕಳಪೆಯಾಗಿದೆ ಎಂದು ಆರೋಪಿಸಿ ಆ ಕುರಿತ ಫೋಟೋಗಳನ್ನು ಪೀಠಕ್ಕೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಳಪೆ ಕಾಮಗಾರಿಗಳನ್ನು ಸಹಿಸುವುದು ಸಾಧ್ಯವಿಲ್ಲ. ಆದ್ದರಿಂದ ಪುರಾತತ್ವ ಇಲಾಖೆ ಅಧಿಕಾರಿಗಳು ಮತ್ತು ಅರ್ಜಿದಾರರು ಸ್ಥಳ ಪರಿಶೀಲಿಸಿ ವಾಸ್ತವಾಂಶಗಳನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.