ಬೆಂಗಳೂರು : ಅಪಘಾತದಲ್ಲಿ ನೊಂದ ವ್ಯಕ್ತಿಯ ಸ್ಥಿತಿ ಆಧರಿಸಿ ಆತ ಕೇಳಿದ್ದಕ್ಕಿಂತಲೂ ಹೆಚ್ಚಿನ ಪರಿಹಾರವನ್ನು ನೀಡಲು ನ್ಯಾಯಾಲಯ ಆದೇಶಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮೋಟರು ವಾಹನ ಅಪಘಾತ ಕ್ಲೇಮು ನ್ಯಾಯಾಧಿಕರಣ ಆದೇಶಿಸಿರುವ ಪರಿಹಾರ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಕೋರಿ ಹಾವೇರಿ ಜಿಲ್ಲೆಯ ಬಸವರಾಜು, ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಹಾಗೂ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ :
2011ರ ಸೆಪ್ಟೆಂಬರ್ 11ರಂದು 14 ವರ್ಷದ ಬಸವರಾಜು ತಮ್ಮ ತಂದೆಯೊಂದಿಗೆ ನಡೆದು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ 13 ದಿನಗಳ ಕಾಲ ಒಳರೋಗಿಯಾಗಿ ದಾಖಲಾಗಿದ್ದ ಬಸವರಾಜುಗೆ ಕೆಲ ಶಸ್ತ್ರ ಚಿಕಿತ್ಸೆಗಳೂ ನಡೆದಿದ್ದವು. ಅಪಘಾತದ ಪರಿಣಾಮವಾಗಿ ಸೊಂಟದ ಬಹುತೇಕ ಭಾಗಗಳಿಗೆ ಹಾನಿಯಾಗಿತ್ತಲ್ಲದೇ, ಮರ್ಮಾಂಗ ಶೇ.40ರಷ್ಟು ನಾಶವಾಗಿತ್ತು.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಕೋರಿ ಬಸವರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಣೆಬೆನ್ನೂರಿನ ಮೋಟಾರು ವಾಹನ ಅಪಘಾತ ಕ್ಲೇಮು ನ್ಯಾಯಾಧಿಕರಣ 2012ರಲ್ಲಿ 3,73,988 ರೂಪಾಯಿ ಪರಿಹಾರ ನೀಡಲು ವಿಮಾ ಸಂಸ್ಥೆಗೆ ಆದೇಶಿಸಿತ್ತು. ಈ ಪರಿಹಾರ ಮೊತ್ತ ಕಡಿಮೆಯಾಗಿದ್ದು, ಅದನ್ನು 11.75 ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ಕೋರಿ ಬಸವರಾಜು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ತೀರ್ಪು :
ಅರ್ಜಿದಾರ ಯುವಕನ ಮರ್ಮಾಂಗಕ್ಕೆ ಆಗಿರುವ ಹಾನಿ ಶಾಶ್ವತವಾದದ್ದು ಹಾಗೂ ಸರಿಪಡಿಸಲಾಗದ್ದು ಎಂದು ವೈದ್ಯರು ಹೇಳಿದ್ದಾರೆ. ಇದರಿಂದಾಗಿ ಯುವಕನ ಜೀವನದಲ್ಲಿ ಲೈಂಗಿಕ ಸುಖ ಶಾಶ್ವತವಾಗಿ ನಶಿಸಿಹೋಗಿದೆ. ಅಪಘಾತದಿಂದ ಮದುವೆಯಾಗದೆ ಜೀವನ ಪರ್ಯಂತ ಒಂಟಿಯಾಗಿ ಉಳಿಯುವ ಮತ್ತು ಈ ಕುರಿತು ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮಾನಸಿಕವಾಗಿ ನಿತ್ಯವೂ ಸಂಕಟ ಎದುರಿಸಬೇಕಾದ ಸ್ಥಿತಿಗೆ ಒಳಗಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅಪಘಾತ ಕ್ಲೇಮು ನ್ಯಾಯಾಧಿಕರಣಗಳು ಪರಿಹಾರ ನಿಗದಿ ಮಾಡುವಾಗ ನ್ಯಾಯಯುತವಾದ ಮತ್ತು ಉತ್ತಮವಾದ ಪರಿಹಾರ ನಿಗದಿಪಡಿಸಬೇಕಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಅಲ್ಲದೇ, ನೊಂದ ಅರ್ಜಿದಾರ ಕ್ಲೇಮು ಪರಿಹಾರ ಮೊತ್ತ ಕಡಿಮೆ ಕೇಳಿದ್ದಾನೆ ಎಂಬ ಕಾರಣಕ್ಕೂ ಅದನ್ನು ಕಡಿಮೆ ಮಾಡಬಾರದು. ನ್ಯಾಯಾಧಿಕರಣಗಳು ತಮ್ಮ ಅಧಿಕಾರ ಬಳಸಿ ನ್ಯಾಯಯುತ ಪರಿಹಾರ ನೀಡಲು ಪ್ರಯತ್ನಿಸಬೇಕು. ನ್ಯಾಯಯುತ ಪರಿಹಾರ ನಿಗದಿ ಮಾಡದಿದ್ದರೆ ನಮ್ಮ ಕರ್ತವ್ಯದಲ್ಲಿ ವಿಫಲರಾದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ ಅಪಘಾತ ನ್ಯಾಯಾಧಿಕರಣ ನಿಗದಿ ಮಾಡಿದ್ದ 3.73 ಲಕ್ಷ ಹಾಗೂ ಬಸವರಾಜು ಕೋರಿದ್ದ 11.75 ಲಕ್ಷಕ್ಕಿಂತಲೂ ಹೆಚ್ಚಿನ ಪರಿಹಾರ ಮೊತ್ತ 17.68 ಲಕ್ಷ ರೂಪಾಯಿ ಪರಿಹಾರವನ್ನು ವಾರ್ಷಿಕ ಶೇ.6ರಷ್ಟು ಬಡ್ಡಿ ದರದೊಂದಿಗೆ ನೀಡಲು ವಿಮಾ ಸಂಸ್ಥೆಗೆ ಆದೇಶಿಸಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ