ಬೆಂಗಳೂರು: ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ‘ಪೇ ಚವರಾಯಸ್ವಾಮಿ‘ ಅಭಿಯಾನ ನಡೆಸಿ ಸಾರ್ವಜನಿಕ ಪ್ರದೇಶದಲ್ಲಿ ಭಿತ್ತಿಪತ್ರ ಅಂಟಿಸಿದ ಆರೋಪದಲ್ಲಿ ಮಂಡ್ಯದ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಮತ್ತು ದೋಷಾರೋಪ ಪಟ್ಟಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಿ.ಟಿ. ಮಂಜುನಾಥ್ ಸೇರಿ ಐವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ಪ್ರತಿವಾದಿಯಾಗಿರುವ ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಮತ್ತು ದೂರುದಾರ ರುದ್ರೇಗೌಡಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರರು ಸಚಿವ ಚಲುರಾಯಸ್ವಾಮಿ ಮತ್ತು ಸರ್ಕಾರದ ವಿರುದ್ಧ ‘ಪೇ ಸಿಎಸ್/ ಪೇ ಚಲುವರಾಯಸ್ವಾಮಿ ಅಭಿಯಾನ’ದ ಹೆಸರಿನಲ್ಲಿ ೨೦೨೩ರ ಆ.೧೦ರಂದು ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಜತೆಗೆ, ಚಲುವರಾಯ ಸ್ವಾಮಿ ಮತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ೬ರಿಂದ ೮ ಲಕ್ಷ ರು. ಪಾವತಿಸುವಂತೆ ಅಡಿ ಬರಹ ಬರೆದು, ಕ್ಯೂಆರ್ ಸ್ಯಾನ್ ಜೊತೆಗೆ ಚಲುವರಾಯ ಸ್ವಾಮಿ ಅವರ ಪೋಟೋ ಇರುವ ಭಿತ್ತಿಪತ್ರವನ್ನು ಸಂಜಯ ಸರ್ಕಲ್ ಅಲ್ಲಿ ಅಂಟಿಸಿದ್ದರು.
ಈ ಸಂಬಂಧ ಮಂಡ್ಯದ ಕಾವೇರಿ ನಗರದ ನಿವಾಸಿ ರುದ್ರೇಗೌಡ ದೂರು ನೀಡಿದ್ದರು. ಅದನ್ನು ಆಧರಿಸಿ ಅರ್ಜಿದಾರರಾದ ಸಿ.ಟಿ.ಮಂಜುನಾಥ್, ಎಸ್.ಶಿವಕುಮಾರ್ ಆರಾಧ್ಯ, ಪ್ರಸನ್ನ ಕುಮಾರ್, ಶಿವ ಕುಮಾರ್ ಮತ್ತು ವಿನೂ ಭಾಯ್ ವಿರುದ್ಧ ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಭಿತ್ತಿ ಪತ್ರ ಅಳವಡಿಸಿ ಸಾರ್ವಜನಿಕ ಪ್ರದೇಶದ ಸೌಂದರ್ಯ ಹಾಳು ಮಾಡಿದ ಆರೋಪದ ಮೇಲೆ ಕರ್ನಾಟಕ ಮುಕ್ತ ಪ್ರದೇಶಗಳ ವಿರೂಪ ತಡೆ ಕಾಯ್ದೆಯಡಿ 2023ರ ಆ.30ರಂದು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕರ ಇಡಿಗಂಟು ಹೆಚ್ಚಳ ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್