ಬೆಂಗಳೂರು : ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಶಾಸಕರು ಮತ್ತು ಸಂಸದರ ವಿಶೇಷ ನ್ಯಾಯಪೀಠದ ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅಲ್ಲದೇ, ಪ್ರಕರಣ ಸಂಬಂಧ ಗದಗದ 1ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ತಡೆ ನೀಡಿದೆ. ಜೊತೆಗೆ, ಮೂಲ ದೂರುದಾರರಾದ ಮಂಜುನಾಥ್ ಕಲಬುರಗಿ ಅವರಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿರುವ ಕೋರ್ಟ್ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ಮೂಲ ದೂರುದಾರರು ಅರ್ಜಿದಾರರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ದೂರು ನೀಡಿದ್ದಾರೆ. ಅರ್ಜಿದಾರರ ಎದುರಾಳಿಗಳ ಜೊತೆ ಸೇರಿ ರಾಜಕೀಯ ಪಿತೂರಿ ನಡೆಸಿ ದೂರು ನೀಡಲಾಗಿದೆ. ದೂರಿನಲ್ಲಿ ಉಲ್ಲೇಖವಾದ ಅಂಶಗಳನ್ನು ಸೇರಿಸಿ ಗದಗ ಜಿಲ್ಲಾ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದು ಸಮನ್ಸ್ ಜಾರಿ ಮಾಡಿದೆ. ಹಾಗಾಗಿ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದರು. ಇದನ್ನು ನ್ಯಾಯಪೀಠ ಮಾನ್ಯ ಮಾಡಿದ್ದು, ವಿಚಾರಣೆಗೆ ತಡೆ ನೀಡಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಒಂದು ಸಾವಿರ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ: ಬಿಬಿಎಂಪಿ
ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆ ವೇಳೆ ಮೇ 2ರಂದು ಗದಗದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್ ಶೋ ಮೂಲಕ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಬಳಿಕ ಅವರು ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡುವಾಗ ಬಜರಂಗ ದಳವನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಲಿ ಎಂದು ಶಾಸಕ ಯತ್ನಾಳ್ ಹೇಳಿದ್ದರು. ಅಲ್ಲದೇ, ಕಾಂಗ್ರೆಸ್ ಹಾಗೆ ಮಾಡಿದರೆ ಎಲ್ಲ ಹಿಂದೂಗಳು ಬಹಿಷ್ಕಾರ ಹಾಕುತ್ತಾರೆ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ವಿಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರವಾಗಿತ್ತು. ಆ ಮೂಲಕ ಯತ್ನಾಳ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಫೈಯಿಂಗ್ ಸ್ಕ್ವಾಡ್‌ನ ಮಂಜುನಾಥ ಕಲಬುರಗಿ ದೂರು ನೀಡಿದ್ದರು.
ಈ ದೂರು ಆಧರಿಸಿ ಗದಗ ಜಿಲ್ಲಾ ನ್ಯಾಯಾಲಯವು ಇದೇ 20ರಂದು ಖುದ್ದು ಕೋರ್ಟ್ಗೆ ಹಾಜರಾಗುವಂತೆ ಯತ್ನಾಳ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಪ್ರಕರಣದ ರದ್ದು ಕೋರಿ ಯತ್ನಾಳ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ 50 ಚ.ಮೀ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಮಾರ್ಗಸೂಚಿ ರಚಿಸಿ: ಹೈಕೋರ್ಟ್