ಬೆಂಗಳೂರು: ಅಧಿಕಾರಿಗಳು ಹೊರಡಿಸುವ ಆದೇಶಗಳು ವಿವೇಚನಾ ರಹಿತವಿದ್ದಲ್ಲಿ ಅಸಮಂಜಸವಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ರೈಲ್ವೆ ಇಲಾಖೆಯು ಖಾಸಗಿ ಸಂಸ್ಥೆಯೊಂದನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಕ್ರಮ ರದ್ದುಪಡಿಸಿದೆ. ತಮ್ಮ ವಾದವನ್ನು ಆಲಿಸದೇ ಕಪ್ಪು ಪಟ್ಟಿಗೆ ಸೇರಿಸಿದ್ದ ಕ್ರಮ ಪ್ರಶ್ನಿಸಿ ಕೃಷಿ ಇನ್ಫ್ರಾಟೆಕ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸಂಸ್ಥೆಯೊಂದನ್ನು ಕಪ್ಪು ಪಟ್ಟಿಗೆ ಸೇರಿಸಿದಲ್ಲಿ ಆ ಸಂಸ್ಥೆಯ ಆರ್ಥಿಕ ಸ್ಥಿತಿಗತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ಯಾವುದೇ ಪ್ರಕರಣಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಅತ್ಯಂತ ಗಂಭೀರವಾಗಿ ಪರಿಶೀಲಿಸಬೇಕು. ಸಂಸ್ಥೆಯೊಂದನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶಿಸುವಾಗ ಅದಕ್ಕೆ ಸಮರ್ಥವಾದ ಕಾರಣ ದಾಖಲಿಸಬೇಕು. ಜೊತೆಗೆ, ಅದು ತರ್ಕಬದ್ಧವಾಗಿಯೇ ಇರಬೇಕು. ಅಲ್ಲದೇ, ನ್ಯಾಯಾಂಗ, ಅರೆ ನ್ಯಾಯಾಂಗ ಮತ್ತು ಆಡಳಿತಾಧಿಕಾರಿಗಳು ನೀಡುವ ಆದೇಶಗಳು ಹೃದಯ ಬಡಿತದಂತಿರಲಿದ್ದು, ಮುಂದಾಲೋಚನೆ ಮತ್ತು ವಿವೇಚನೆ ಬಳಸದೆ ಕೈಗೊಳ್ಳುವ ನಿರ್ಧಾರಗಳು ನಿರ್ಜೀವಗೊಳಿಸಿದಂತಾಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ರೈಲ್ವೆ ಅಧಿಕಾರಿಗಳು ಒಂದು ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವ ಸಂದರ್ಭದಲ್ಲಿ ನೋಟಿಸ್ ಜಾರಿ ಮಾಡಿದರೆ ಸಾಕಾಗುವುದಿಲ್ಲ. ಬದಲಾಗಿ ಅದಕ್ಕೆ ಸಂಬಂಧಿಸಿದಂತೆ ಪ್ರತಿವಾದಿ ಸಲ್ಲಿಸುವ ಆಕ್ಷೇಪಣೆಗಳು, ಮನವಿಗಳನ್ನು ಪರಿಶೀಲನೆ ಮಾಡಿ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದಲ್ಲಿ ಅದು ದಮನಕಾರಿ ನೀತಿಯಾಗಲಿದೆ. ವಿವೇಚನಾರಹಿತ ಆದೇಶಗಳು ಅಸಮಂಜಸವಾಗಲಿವೆ. ಈ ಮೂಲಕ ಅರ್ಜಿಯನ್ನು ಪುರಸ್ಕರಿಸಿ, ರೈಲ್ವೆ ಅಧಿಕಾರಿಗಳ ಆದೇಶ ರದ್ದುಪಡಿಸಿದೆ. ಇದೇ ವೇಳೆ, ಪ್ರಕರಣವನ್ನು ರೈಲ್ವೆ ಮಂಡಳಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಹಿಂದಿರುಗಿಸಿದ್ದು, ಕಾನೂನು ಪ್ರಕಾರ ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದು ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರರಾದ ಕೃಷಿ ಇನ್ಪ್ರಾಟೆಕ್ ಸಂಸ್ಥೆ 2011ರಿಂದ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ವಿವಿಧ ಗುತ್ತಿಗೆ ಕಾಮಗಾರಿಗಳನ್ನು ನಡೆಸುತ್ತಿತ್ತು. ರೈಲ್ವೆ ಇಲಾಖೆಯಿಂದ ಪಡೆದ ಗುತ್ತಿಗೆಗಳನ್ನು ಪಡೆದು ನಿಯಮಗಳ ಪ್ರಕಾರ ಕಾರ್ಯಗತಗೊಳಿಸುತ್ತಿತ್ತು. 2018ರಲ್ಲಿ ನವೆಂಬರ್ 5 ರಂದು ಯಶವಂತಪುರದಿಂದ ಯಲಹಂಕ ಮಾರ್ಗದಲ್ಲಿ ಬರುವ ಮೇಲ್ಸೇತುವೆಗಳಿಗೆ ಕಬ್ಬಿಣದ ರಾಡ್ಗಳ ಅಳವಡಿಕೆಗೆ ಟೆಂಡರ್ ಪಡೆದುಕೊಂಡಿತ್ತು. ಇದಾದ ನಂತರ 2018ರ ನವೆಂಬರ್ 5 ರಂದು ಪೂರ್ಣಗೊಳಿಸಿತ್ತು. ಎರಡು ವರ್ಷಗಳ ಕಾಲ ಕಾಮಗಾರಿ ನಡೆಸಿದ ಆರೋಪ ಸಂಬಂಧ ರೈಲ್ವೆ ಇಲಾಖೆ ನೋಟಿಸ್ ಜಾರಿ ಮಾಡಿ, ಪ್ರತಿಕ್ರಿಯೆ ನೀಡಬೇಕು ಎಂದು ಸೂಚನೆ ನೀಡಲಾಗಿತ್ತು.
ಇದಕ್ಕಾಗಿ ಅರ್ಜಿದಾರರ ಸಂಸ್ಥೆ, ಪ್ರತಿಯೊಂದು ಆರೋಪಗಳಿಗೆ ನಾಲ್ಕು ಬಾರಿ ಉತ್ತರಗಳನ್ನು ನೀಡಿತ್ತು. ಅಲ್ಲದೆ, ಅರ್ಜಿದಾರರು ರೈಲ್ವೆ ಕಚೇರಿಗೆ ಭೇಟಿ ನೀಡಿ ವಿವರಣೆಯನ್ನೂ ನೀಡಿದ್ದರು. ಆದರೂ, 2022ರ ಅಕ್ಟೋಬರ್ 17ರಂದು ಅರ್ಜಿದಾರರ ಸಂಸ್ಥೆಯನ್ನು ಐದು ವರ್ಷಗಳ ಕಾಲ ಕಪ್ಪು ಪಟ್ಟಿಗೆ ಸೇರಿಸಿ ಆದೇಶಿಸಿದ್ದರು. ಅದೇ ದಿನ ರೈಲ್ವೆ ಇಲಾಖೆಯ ಟೆಂಡರ್ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿತ್ತು. ಇದರಿಂದ ಮುಂದಿನ ಟೆಂಡರ್ನಲ್ಲಿ ಭಾಗಿಯಾಗಿದ್ದರೂ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿ ಅರ್ಜಿದಾರರ ಸಂಸ್ಥೆನ್ನು ಟೆಂಡರ್ನಲ್ಲಿ ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರ ಸಂಸ್ಥೆಯ ವಿರುದ್ಧ ಯಾವುದೇ ಗಂಭೀರವಾದ ಆರೋಪ ಇಲ್ಲದಿದ್ದರೂ, ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ಸಂಬಂಧ ಪ್ರತ್ಯುತ್ತರ ನೀಡಿದ್ದರೂ, ಪರಿಗಣಿಸಿಲ್ಲ. ಇದು ನಿಯಮ ಬಾಹಿರವಾಗಿದ್ದು ಕಪ್ಪು ಪಟ್ಟಿಗೆ ಸೇರಿಸಿರುವ ಕ್ರಮ ರದ್ದು ಪಡಿಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ರೈಲ್ವೆ ಇಲಾಖೆಯ ಪರವಾಗಿ ವಾದಿಸಿದ ವಕೀಲರು ಅರ್ಜಿದಾರರ ವಾದವನ್ನು ನಿರಾಕರಿಸಿದರು. ಜೊತೆಗೆ, ಅರ್ಜಿದಾರ ಸಂಸ್ಥೆ ನಿರ್ಮಿಸಿರುವ ಮೇಲ್ಸೇತುವೆ ಬಿದ್ದು, ಸಾರ್ವಜನಿಕರ ಜೀವಕ್ಕೆ ಹಾನಿಯಾಗುವಂತಹ ದುಷ್ಕೃತ್ಯವನ್ನು ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಅಡಿಯಲ್ಲಿಯೇ ಅರ್ಜಿದಾರರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ರೈಲ್ವೆ ಇಲಾಖೆ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ.
ಇದನ್ನೂ ಓದಿ: ಹಿಜಾಬ್ ಕಡ್ಡಾಯವಲ್ಲ, ಎಸಿಬಿ -ಪಿಎಫ್ಐ ರದ್ದು.. 2022ರಲ್ಲಿ ಹೈಕೋರ್ಟ್ ನೀಡಿದ ಮಹತ್ವದ ತೀರ್ಪುಗಳು