ಬೆಂಗಳೂರು: ನಗರದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಂದ 60 ಕೋಟಿ ಸಾಲ ಪಡೆದು ಯಾವುದಕ್ಕೆ ಬಳಕೆ ಮಾಡಲಾಗಿದೆ ಎಂಬುದರ ಕುರಿತು ವಿವರಣೆ ನೀಡದ ಪರಿಣಾಮ ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಜಿ.ರಘುನಾಥ್ ಅವರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ರಘುನಾಥ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕ ಸದಸ್ಯಯಪೀಠ ಜಾಮೀನು ನೀಡಲು ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಅರ್ಜಿದಾರರು 60 ಕೋಟಿ ರೂ. ನಗದನ್ನು ಸಾಲದ ರೂಪದಲ್ಲಿ ಪಡೆದಿರುವ ಪ್ರಕ್ರಿಯೆ ಕಾನೂನಿಗೆ ವಿರುದ್ಧವಾಗಿದೆ.
ಈ ಸಾಲವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ವಿವರಗಳನ್ನು ಅವರು ತಿಳಿಸಿಲ್ಲ. ಈ ಸಂದರ್ಭದಲ್ಲಿ ಜಾಮೀನು ನೀಡಿದರೆ ಅವರು ತಮ್ಮ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡದಂತೆ ತಡೆಯುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ: ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ನಿಯಮಿತ ಸಹಕಾರಿ ಬ್ಯಾಂಕ್ನಲ್ಲಿ ನಕಲಿ ಠೇವಣಿಗಳನ್ನು ಸೃಷ್ಟಿಸಿ, ಸೂಕ್ತ ದಾಖಲೆಗಳಿಲ್ಲದೇ ಸಾಲ ಮಂಜೂರು ಮಾಡಲಾಗಿದೆ. ಇದರಿಂದ ಬ್ಯಾಂಕ್ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಇತರರ ವಿರುದ್ಧ ಇಡಿ ಪ್ರಕರಣ ದಾಖಲಿಸಿತ್ತು. ಪ್ರಕರಣದಲ್ಲಿ ರಘುನಾಥ್ 17ನೇ ಆರೋಪಿಯಾಗಿದ್ದರು.
ರಘುನಾಥ್, ಬ್ಯಾಂಕ್ ನಿಂದ 105 ಕೋಟಿ ರೂ. ಸಾಲ ಪಡೆದಿದ್ದು, 139.85 ಕೋಟಿ ರೂ. ಮೊತ್ತಕ್ಕೆ ಸುಸ್ತಿದಾರನಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಹಣ ವಂಚಿಸಿದ್ದಾರೆ ಎಂದು ಇಡಿ ಅಧಿಕಾರಿಗಳು 2022ರ ಜೂನ್ 28ರಂದು ಬಂಧಿಸಿದ್ದರು.
ಇದನ್ನೂ ಓದಿ: ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಬಹುದು: ನ್ಯಾ ನಾಗಮೋಹನದಾಸ್ ಸಂದರ್ಶನ