ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಎಫ್ಇಎಂಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಗಳ (ಐಟಿ) ಉಲ್ಲಂಘನೆ ಆರೋಪದಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ನೋಟಿಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. 2018ರ ಅಕ್ಟೋಬರ್ 26 ರಂದು ತನ್ನ ಬ್ಯಾಂಕ್ ಖಾತೆಗಳಿಗೆ ಇಡಿ ವಿಧಿಸಿದ್ದ ನಿರ್ಬಂಧಿತ ಕ್ರಮ ಪ್ರಶ್ನಿಸಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಮತ್ತು ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಟ್ರಸ್ಟ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖ ಅವರಿದ್ದ ನ್ಯಾಯಪೀಠ, ನೋಟಿಸ್ ಕೇವಲ 60 ದಿನಗಳ ಮಾನ್ಯತೆ ಹೊಂದಿದೆ. ಹೀಗಾಗಿ ರದ್ದುಗೊಳಿಸುತ್ತಿರುವುದಾಗಿ ತಿಳಿಸಿ ಅರ್ಜಿ ಇತ್ಯರ್ಥಪಡಿಸಿದರು.
ಅರ್ಜಿದಾರರ ಪರ ವಕೀಲರು ವಾದಿಸಿ, ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ 1999ರ ಸೆಕ್ಷನ್ 37ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದೆ. ಈ ನೋಟಿಸ್ಗೆ ಕೇವಲ 60 ದಿನ ಮಾತ್ರ ಕಾಲಮಿತಿ ಇದೆ. ಅಲ್ಲದೇ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 8ಎ ಅಡಿ ಜಾರಿ ಮಾಡಿರುವ ನೋಟಿಸ್ಗೆ 60 ದಿನ ಮಾತ್ರ ಮಾನ್ಯತೆ ಹೊಂದಿದೆ. ಹೀಗಾಗಿ ನೋಟಿಸ್ ಜಾರಿ ಮಾಡಿದ 60 ದಿನದ ಬಳಿಕ ಅದು ಮಾನ್ಯತೆ ಕಳೆದುಕೊಳ್ಳಲಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ, ಗ್ರೀನ್ ಪೀಸ್ ಇಂಡಿಯಾ ಸೊಸೈಟಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನೀಡುವ ನೋಟಿಸ್ 60 ದಿನಗಳ ಬಳಿಕ ಮಾನ್ಯತೆ ಕಳೆದುಕೊಳ್ಳಲಿದೆ ಎಂದು ಹೈಕೋರ್ಟ್ 2019ರಲ್ಲಿ ತಿಳಿಸಿದೆ. ಈ ರೀತಿಯ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ವಿವರಿಸಿದರು.
ದೇಶದಲ್ಲಿ ಮಾನವ ಹಕ್ಕುಗಳ ಕುರಿತಂತೆ ಹೋರಾಟ ನಡೆಸುತ್ತಿರುವ ಅಮ್ನೆಸ್ಟಿ ಇಂಟರ್ ನ್ಯಾಷನಲ್‌ಗೆ ಸೇರಿದ ಹಲವು ಬ್ಯಾಂಕ್ ಖಾತೆಗಳನ್ನು ಇಡಿ, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆಯ ಕಾನೂನುಗಳ ಅಡಿಯಲ್ಲಿ ನಿರ್ಬಂಧ ವಿಧಿಸಿತ್ತು. ಜಾರಿ ನಿರ್ದೇಶನಾಲಯದ ನಡೆಯಿಂದ 2020ರಿಂದ ಭಾರತದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಕ್ಕೆ ಸಂಸ್ಥೆ ನಿರ್ಧರಿಸಿತ್ತು. ಅಮ್ನೆಸ್ಟಿ ಪ್ರತಿಷ್ಠಾನದ ಟ್ರಸ್ಟ್ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ 2018ರ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿರುವ ಆಸ್ತಿಗಳ ಮೇಲೆ ಇಡಿ ದಾಳಿ ನಡೆಸಿತ್ತು. ಆದರೆ, ಪ್ರಕರಣ ದಾಖಲಿಸಿರಲಿಲ್ಲ.
ಇದನ್ನೂ ಓದಿ: 81 ವರ್ಷದ ಅಪರಾಧಿಗೆ ಸಂಬಳವಿಲ್ಲದೆ ಅಂಗನವಾಡಿಯಲ್ಲಿ ಕೆಲಸ ಮಾಡುವ ಶಿಕ್ಷೆ ವಿಧಿಸಿದ ಹೈಕೋರ್ಟ್