ಬೆಂಗಳೂರು: ಪೇಸಿಎಂ ಅಭಿಯಾನಕ್ಕೆ ಕರೆ ಕೊಟ್ಟಿದ್ದ ಆರೋಪದ ಮೇಲೆ ಬೆಂಗಳೂರಿನ ನೆಲಮಂಗಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಜೆ ಎಸ್ ನಾರಾಯಣ ಗೌಡ ಮತ್ತು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ವಿ ರಾಮಕೃಷ್ಣ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಇಂದು ವಜಾಗೊಳಿಸಿತು.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದ ವಜಾ ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸಿತು. ಅರ್ಜಿದಾರರು ಇತರೆ ಆರೋಪಿಗಳಿಗೆ ಮೊಬೈಲ್ ಮೂಲಕ ಕರೆ ಮಾಡಿ ಪೋಸ್ಟರ್ ಅಥವಾ ಭಿತ್ತಿಪತ್ರಗಳನ್ನು ಅಂಟಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಸಾರ್ವಜನಿಕ ಆಸ್ತಿ ಹಾನಿ ನಿಯಂತ್ರಣ ಕಾಯ್ದೆ ಮತ್ತು ಕರ್ನಾಟಕ ಸಾರ್ವಜನಿಕ ಸ್ಥಳ ವಿಕಾರ ಕಾಯ್ದೆ ನಿಬಂಧನೆಗಳ ಅಡಿ ಇವರು ಅಪರಾಧಿಗಳಾಗುವುದಿಲ್ಲ. ಅಲ್ಲದೇ, ಈ ಕಾಯ್ದೆ ಅಡಿಯಲ್ಲಿ ಅಪರಾಧವಾಗುವಂತಹ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ಮತ್ತು ನೆಲಮಂಗಲದ 2ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಲ್ಲಿನ ಪ್ರಕ್ರಿಯೆ ವಜಾಗೊಳಿಸುತ್ತಿರುವುದಾಗಿ ಪೀಠ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ರಸ್ತೆಯಲ್ಲಿ ಯುವಕನ ಪೇಸಿಎಂ ಶರ್ಟ್ ಬಿಚ್ಚಿಸಿ, ಹೊಡೆದ ಪೊಲೀಸ್
ಆದೇಶದಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯವು ಹಾಲಿ ಅರ್ಜಿದಾರರ ವಿರುದ್ಧ ಪ್ರಕರಣವನ್ನು ಪರಿಗಣಿಸುವುದಕ್ಕೆ ಸೀಮಿತವಾಗಿದ್ದು, ಇತರೆ ಆರೋಪಿಗಳ ವಿರುದ್ಧದ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಹೀಗಿದೆ..: ಅರ್ಜಿದಾರರ ಸೂಚನೆಯಂತೆ ವರುಣ್, ಕೃಷ್ಣ ಪವಾರ್ ಮತ್ತು ಸಿ ಅಶೋಕ್ ಕುಮಾರ್ ಎಂಬುವರು ಸೆ.22ರ ರಾತ್ರಿ ನೆಲಮಂಗಲ ನಗರದ ವಿವಿಧ ಭಾಗಗಳಲ್ಲಿ ಮುಖ್ಯಮಂತ್ರಿ ಭಾವಚಿತ್ರದೊಂದಿಗೆ ಕ್ಯೂಆರ್ ಕೋಡ್ ಇರುವ ಭಿತ್ತಿಪತ್ರ ಅಂಟಿಸುತ್ತಿದ್ದರು. ಆ ಭಿತ್ತಿಪತ್ರದಲ್ಲಿ ಪೇಸಿಎಂ, ಶೇ.40ರಷ್ಟು (ಲಂಚ) ಇಲ್ಲಿ ಸ್ವೀಕರಿಸಲಾಗಿದೆ, 40 ಪರ್ಸೆಂಟ್ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಲು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಂಬ ಅಂಶಗಳಿದ್ದವು.
ಇದನ್ನೂ ಓದಿ: ಬಳ್ಳಾರಿಯಲ್ಲಿ ಅನುಮತಿ ಇಲ್ಲದೇ ರೈಲ್ವೆ ಇಲಾಖೆ ಗೋಡೆ ಮೇಲೆ ಪೇಸಿಎಂ ಪೋಸ್ಟರ್; ಕೇಸ್ ದಾಖಲು
ಈ ಭಿತ್ತಿಪತ್ರಗಳನ್ನು ಅಂಟಿಸಿ ಸಾರ್ವಜನಿಕ ಸ್ಥಳವನ್ನು ಹಾಳು ಮಾಡಲಾಗುತ್ತಿದೆ ಎಂದು ನೆಲಮಂಗಲ ಠಾಣೆಯ ಎಎಸ್‌ಐ ಕೆ ಆರ್ ನಾರಾಯಣ್ ರಾವ್ ನೀಡಿದ್ದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿ ಹಾನಿ ನಿಯಂತ್ರಣ ಕಾಯ್ದೆ ಮತ್ತು ಕರ್ನಾಟಕ ಸಾರ್ವಜನಿಕ ಸ್ಥಳ ಹಾಳುಗೆಡಿಸುವುದನ್ನು ನಿಯಂತ್ರಿಸುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಾಂಗ್ರೆಸ್ನ 'ಪೇ ಸಿಎಂ' ಅಭಿಯಾನ