ಬೆಂಗಳೂರು: ಉಡುಪಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೈಕೋರ್ಟ್ ಅಲ್ಲಿನ ನ್ಯಾಯಾಲಯಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳು ಮತ್ತು ಕಲಬುರಗಿ ಜಿಲ್ಲೆಯ ಚಿತ್ತಾಪುರ, ಚಿಂಚೋಳಿ ತಾಲೂಕು ನ್ಯಾಯಾಲಯಗಳು ಫಿಸಿಕಲ್ ಕೋರ್ಟ್ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಜೂನ್ 5 ಮತ್ತು 6ರಂದು ಈ ಕೋರ್ಟ್ಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು, ಕೋರ್ಟ್ ಶುಲ್ಕ ಪಾವತಿಸಲು ಮತ್ತು ವಕೀಲರು ನೇರವಾಗಿ ತೆರಳಿ ವಾದ ಮಂಡಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿ ಕರ್ ಆದೇಶ ಹೊರಡಿಸಿದ್ದಾರೆ.
ತುರ್ತು ಪ್ರಕರಣಗಳು ಇದ್ದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಚಾರಣೆಯನ್ನು ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಕ್ರಮ ಕೈಗೊಳ್ಳಬಹುದು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಈ ಎರಡು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಕ್ರಮ ಕೈಗೊಂಡಿದೆ. ನಿನ್ನೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 477 ಮತ್ತು ಕಲಬುರಗಿಯಲ್ಲಿ 409 ಕೊರೊನಾ ಸೋಂಕಿತರು ಇದ್ದಾರೆ.