ಬೆಂಗಳೂರು: ರಾಜ್ಯದ 15 ಜಿಲ್ಲೆಗಳಲ್ಲಿ ವಕೀಲರು, ಪಾರ್ಟಿ ಇನ್ ಪರ್ಸನ್ (ಖುದ್ದು ವಾದಿಸುವವರು) ಹಾಗೂ ವಕೀಲರ ಕ್ಲರ್ಕ್ಗಳು ನೇರವಾಗಿ ನ್ಯಾಯಾಲಯಗಳಿಗೆ ತೆರಳಿ ಅರ್ಜಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿ ಸುತ್ತೋಲೆ ಹೊರಡಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆ ಪ್ರಕಾರ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೀದರ್, ಚಿಕ್ಕಮಗಳೂರು, ಧಾರವಾಡ, ದಕ್ಷಿಣ ಕನ್ನಡ, ಕೋಲಾರ, ಕೊಡಗು, ಗದಗ, ಹಾವೇರಿ, ಮಂಡ್ಯ, ಮೈಸೂರು, ತುಮಕೂರು, ಉಡುಪಿ ಮತ್ತು ಯಾದಗಿರಿ ಜಿಲ್ಲಾ ನ್ಯಾಯಾಲಯಗಳಲ್ಲಿ ಮೇ 20, 21 ಮತ್ತು 22 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ತುರ್ತು ವಿಚಾರಣೆ ಇರುವ ಹೊಸ ಅರ್ಜಿಗಳು, ಕೇವಿಯಟ್ ಅರ್ಜಿ, ವಕಾಲತ್ತು ಹಾಗೂ ಮಧ್ಯಂತರ ಅರ್ಜಿಗಳನ್ನು ದಾಖಲಿಸಬಹುದಾಗಿದೆ.
ಅರ್ಜಿಗಳನ್ನು ದಾಖಲಿಸುವವರು ಮೊದಲಿಗೆ ಇ-ಮೇಲ್ ಮೂಲಕ ಅನುಮತಿ ಕೋರಬೇಕು. ಕೋರ್ಟ್ ಸಮಯ ನಿಗದಿಪಡಿಸಿ, ಅರ್ಜಿ ದಾಖಲಿಸುವ ಸಮಯವನ್ನು ಇ-ಮೇಲ್ ಮೂಲಕ ತಿಳಿಸಲಿದೆ. ನಂತರ ಅರ್ಜಿ ದಾಖಲಿಸುವವರು ಹತ್ತು ನಿಮಿಷ ಮುಂಚಿತವಾಗಿ ಕೋರ್ಟ್ ಗೆ ತೆರಳಬೇಕು. ಕೋರ್ಟ್‌ಗೆ ಬರುವವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ರೋಗ ಲಕ್ಷಣ ಇಲ್ಲದವರಿಗೆ ಮಾತ್ರ ಕೋರ್ಟ್ ಒಳಗೆ ಪ್ರವೇಶಾವಕಾಶ ಕಲ್ಪಿಸಬೇಕು. ಅರ್ಜಿ ದಾಖಲಿಸಲು ಬರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಲಾಕ್‌ಡೌನ್ ಘೋಷಣೆಯಾದ ಮಾ.24ರ ಬಳಿಕ ವಕೀಲರು ಖುದ್ದು ಕೋರ್ಟ್‌ಗೆ ತೆರಳಿ ಅರ್ಜಿ ದಾಖಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ತುರ್ತು ಅರ್ಜಿಗಳನ್ನು ಇ-ಫೈಲಿಂಗ್ ಮೂಲಕ ದಾಖಲಿಸಲು ಅವಕಾಶ ನೀಡಲಾಗಿತ್ತು. ಮೇ 13ರಿಂದ ಮೂರು ದಿನ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದಲ್ಲಿ ನೇರವಾಗಿ ತೆರಳಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ತುರ್ತು ಅರ್ಜಿಗಳ ವಿಚಾರಣೆಗೆ ಅನುಕೂಲ ಆಗುವಂತೆ 15 ಜಿಲ್ಲೆಗಳಲ್ಲಿ ಈ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ.