ಬೆಂಗಳೂರು: ಮಂಗಳೂರಿನ ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವು ಮಾಡಲು ನಿರಂತರವಾಗಿ ನೆಪಗಳನ್ನು ಹೇಳುತ್ತಿರುವ ಸರ್ಕಾರದ ವಿರುದ್ಧ ಗುಡುಗಿರುವ ಹೈಕೋರ್ಟ್, ನಿಮ್ಮದು ಸಂವೇದನಾರಹಿತ ಸರ್ಕಾರ ಎಂದು ಕರೆಯಬೇಕೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.
ಪಚ್ಚನಾಡಿಯ ಘನತ್ಯಾಜ್ಯ ಭೂಭರ್ತಿ ಘಟಕ ಕುಸಿತ ದುರ್ಘಟನೆಗೆ ಸಂಬಂಧಿಸಿದಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಈ ಕಟು ಪ್ರಶ್ನೆ ಕೇಳಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಘಟಕದಲ್ಲಿರುವ ತ್ಯಾಜ್ಯವನ್ನು ತೆರವು ಮಾಡಲು ಸರ್ಕಾರ 73 ಕೋಟಿ ರೂ. ಮಂಜೂರು ಮಾಡಿದೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆ ಸಿಗಬೇಕಿದೆ. ಘಟಕದಲ್ಲಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಕನಿಷ್ಠ 4 ವರ್ಷ ಬೇಕಾಗಬಹುದು ಎಂದರು.
ಸರ್ಕಾರದ ವಾದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪೀಠ, ಘನತ್ಯಾಜ್ಯ ಭೂಭರ್ತಿ ಘಟಕ ಕುಸಿದ ಪರಿಣಾಮ 19 ಜನ ಸಾವನ್ನಪ್ಪಿದ್ದಾರೆ. ಇನ್ನು ಘಟಕದಿಂದ ಹೊರಬರುವ ಕಲ್ಮಶದ ಪರಿಣಾಮ ಫಲ್ಗುಣಿ ನದಿ, ಮರವೂರು ಡ್ಯಾಂ ನೀರು ವಿಷಮಯವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಕಳೆದ ಜುಲೈನಲ್ಲೇ ವರದಿ ಕೊಟ್ಟಿದೆ.
ಇಷ್ಟೆಲ್ಲ ಅನಾಹುತಗಳಾಗುತ್ತಿದ್ದರೂ ನಿಮಗೆ ಕಿಂಚಿತ್ತು ಕಾಳಜಿ ಇಲ್ಲ. ಆ ವಿಷಪೂರಿತ ನೀರನ್ನು ಅಧಿಕಾರಿಗಳಿಗೆ ಕುಡಿಸಬೇಕು. ಆಗ ಗೊತ್ತಾಗುತ್ತದೆ. ನೆಪ ಹೇಳುವುದು ಸುಲಭ. ಅದಕ್ಕೆ ಅದನ್ನೇ ವರ್ಷದಿಂದಲೂ ಮಾಡುತ್ತಿದ್ದೀರಿ. ನಿಮ್ಮದು ಸಂವೇದನಾರಹಿತ ಸರ್ಕಾರ ಎಂದು ಕೋರ್ಟ್ ದಾಖಲಿಸಬೇಕೆ ಎಂದು ಪೀಠ ಸರ್ಕಾರದ ವಿರುದ್ಧ ಹರಿಹಾಯ್ದಿತು.
ಅಲ್ಲದೇ ಸಚಿವ ಸಂಪುಟದ ಅನುಮೋದನೆ ನೆಪ ಹೇಳುತ್ತಾ ಕಾಲಹರಣ ಮಾಡದೇ ಘಟಕದಲ್ಲಿರುವ ತ್ಯಾಜ್ಯ ವಿಲೇವಾರಿಗೆ ಎಲ್ಲ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿ, ವಿಚಾರಣೆಯನ್ನು ಫೆ.23ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿದರು.
ಇದನ್ನೂ ಓದಿ : ಹಿಜಾಬ್ ವಿಚಾರದಲ್ಲಿ ರಾಜಕೀಯ ಪಕ್ಷಗಳ ಕೈವಾಡವಿದೆ: ಮಾಜಿ ಸಿಎಂ ಕುಮಾರಸ್ವಾಮಿ