ಬೆಂಗಳೂರು: ಕುಂಬಾರ ಸಂಘದ ನಿರ್ದೇಶಕ ಮಂಡಳಿಗೆ ನವೆಂಬರ್ 25 ರೊಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿರುವ ಹೈಕೋರ್ಟ್, ತಕ್ಷಣವೇ ಚುನಾವಣಾಧಿಕಾರಿಯನ್ನು ನೇಮಕ ಮಾಡುವಂತೆ ಸಹಕಾರ ಸಂಘಗಳ ನಿಬಂಧಕರಿಗೆ ನಿರ್ದೇಶನ ನೀಡಿದೆ.
ಕುಂಬಾರ ಸಂಘಕ್ಕೆ 2017ರ ಮಾರ್ಚ್ 3 ರಂದು ನಡೆದಿದ್ದ ಚುನಾವಣೆ ರದ್ದುಪಡಿಸುವಂತೆ ಕೋರಿ ಆರ್. ಶ್ರೀನಿವಾಸ್ ಮತ್ತಿತರರು 2019 ರಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ತಕರಾರು ಅರ್ಜಿಯ ಮರು ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಸಹಕಾರ ಸಂಘಗಳ ನಿಬಂಧಕರು ತಕ್ಷಣ ಚುನಾವಣಾಧಿಕಾರಿಯನ್ನು ನೇಮಕ ಮಾಡಬೇಕು. 2020 ರ ನವೆಂಬರ್ 25ರೊಳಗೆ ಸಂಘದ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಸಬೇಕು. ಆಡಳಿತಾಧಿಕಾರಿ ತಕ್ಷಣ ಸಂಘದ ಕಾರ್ಯಾಭಾರ ವಹಿಸಿಕೊಳ್ಳಬೇಕು. ಸಂಘದ ನಿರ್ದೇಶಕ ಮಂಡಳಿ ಆಡಳಿತಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಬೇಕು. ಹೊಸ ನಿರ್ದೇಶಕ ಮಂಡಳಿ ರಚನೆಯಾಗುವವರೆಗೆ ಆಡಳಿತಾಧಿಕಾರಿ ಸಂಘದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಇದೇ ವೇಳೆ, 2017 ರ ಮಾರ್ಚ್ 3 ರಂದು ನಡೆದಿದ್ದ ಚುನಾವಣಾ ಪ್ರಕ್ರಿಯೆ, ಚುನಾಯಿತ ಸದಸ್ಯರ ಪಟ್ಟಿ ಹಾಗೂ ಚುನಾಯಿತ ನಿರ್ದೇಶಕ ಮಂಡಳಿಗೆ ಸಂಘದ ವ್ಯವಹಾರ ನಿರ್ವಹಿಸಲು ಮತ್ತು ಚುನಾವಣೆ ನಡೆಸಲು ಅನುಮತಿ ನೀಡಿ ಸಹಕಾರ ಸಂಘಗಳ ಉಪನಿಬಂಧಕರು 2019 ರ ಫೆಬ್ರವರಿ 23 ರಂದು ಹೊರಡಿಸಿದ್ದ ಹಿಂಬರವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಕುಂಬಾರ ಸಂಘಕ್ಕೆ 2017 ರ ಮಾ.3 ರಂದು ನಡೆದಿದ್ದ ಚುನಾವಣೆ ರದ್ದುಪಡಿಸುವಂತೆ ಕೋರಿ ಆರ್. ಶ್ರೀನಿವಾಸ್ ಹಾಗೂ ಇತರೆ ನಾಲ್ವರು 2019 ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಸಂಘಕ್ಕೆ ಹೊಸದಾಗಿ ಚುನಾವಣೆ ನಡೆಸುವಂತೆ 2020ರ ಮಾ.11 ರಂದು ಸಹಕಾರ ಸಂಘಗಳ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಂಘದ ಅಧ್ಯಕ್ಷ ಮುನಿಸ್ವಾಮಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ ಪ್ರಕರಣವನ್ನು ಮರು ವಿಚಾರಣೆ ನಡೆಸಿ ಆದೇಶಿಸುವಂತೆ ಏಕಸದಸ್ಯ ಪೀಠಕ್ಕೆ ಸೂಚಿಸಿತ್ತು.