ಬೆಂಗಳೂರು: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ 189 ರೈತರಿಗೆ ಒಂದು ವಾರದಲ್ಲಿ ಪರಿಹಾರ ಹಣ ನೀಡಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಅಖಂಡ ಕರ್ನಾಟಕ ರೈತ ಸಂಘದ ಯಾದಗಿರಿ ಜಿಲ್ಲಾ ಸಂಚಾಲಕ ಮಲ್ಲನಗೌಡ ಪರಿವಾನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಕೋರ್ಟ್ ಆದೇಶದ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದರಲ್ಲಿ 2016-17 ನೇ ಸಾಲಿನ 189 ರೈತರಿಗೆ ಬೆಳೆ ವಿಮೆ ಪರಿಹಾರ ಇನ್ನೂ ಸಿಗದಿರುವುದನ್ನು ಗಮನಸಿದ ಪೀಠ, ಒಂದು ವಾರದಲ್ಲಿ ಎಲ್ಲಾ 189 ರೈತರ ಖಾತೆಗಳಿಗೆ ಹಣ ಜಮೆ ಮಾಡಬೇಕು. ಅದರ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ರೈತರ ಹಣಕ್ಕೆ ಬಡ್ಡಿ ಪಾವತಿ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದಿತು.
ಇದನ್ನೂ ಓದಿ: ನಮ್ಮನ್ನು ಒಗ್ಗೂಡಿಸಲು ಯೋಗೇಶ್ವರ್ ಎಂಟಿಬಿ ಹತ್ರ ಸಾಲ ಮಾಡಿದ್ದರು: ಸಚಿವ ರಮೇಶ್ ಜಾರಕಿಹೊಳಿ
ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ಕೆಲ ರೈತರ ವಿವರ ಸಿಗುತ್ತಿಲ್ಲ. ಕೆಲವು ರೈತರ ಬ್ಯಾಂಕ್ ಖಾತೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು. ಮಧ್ಯ ಪ್ರವೇಶಿಸಿದ ಪೀಠ, ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಪಂಚಾಯತಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರ ನೆರವಿನಿಂದ ರೈತರನ್ನು ಪತ್ತೆ ಹಚ್ಚಿ, ನಂತರ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬೇಕು. 2016-17ನೇ ಸಾಲಿನ ಹಣವನ್ನು ಒಂದು ವಾರದಲ್ಲಿ ಜಮೆ ಮಾಡಬೇಕು. ಹಾಗೆಯೇ 2018-19 ಮತ್ತು 2019-20ನೇ ಸಾಲಿನಲ್ಲಿ ಎಷ್ಟು ರೈತರು ಮನವಿ ಸಲ್ಲಿಸಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿದೆ.