ಬೆಂಗಳೂರು: ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗೂ ಚುನಾವಣೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡುವ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ ಕಲಬುರಗಿ, ಬೆಳಗಾವಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಮಯ ನಿಗದಿಪಡಿಸಿ ಆದೇಶಿಸಿತು.
ವಾರ್ಡ್ ಮರು ವಿಂಗಡಣೆ-ಮೀಸಲು ಪಟ್ಟಿ ಪ್ರಕಟಿಸಲು ಗಡುವು
ಕಲಬುರಗಿ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್ ಮರು ವಿಂಡಗಣೆ ಮತ್ತು ಮೀಸಲು ಪಟ್ಟಿ ಪ್ರಕಟಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ವಿಳಂಬ ಮಾಡದೆ ಮುಂದಿನ 6 ವಾರಗಳಲ್ಲಿ ವಾರ್ಡ್ ಮರು ವಿಂಗಡಣೆ ಅಧಿಸೂಚನೆ ಪ್ರಕಟಿಸಬೇಕು. ಅದಾದ ಎರಡು ತಿಂಗಳಲ್ಲಿ ಮೀಸಲು ಅಧಿಸೂಚನೆ ಪ್ರಕಟಿಸಬೇಕು. ನಂತರದ ಮೂರು ತಿಂಗಳಲ್ಲಿ ಮತದಾರರ ಪಟ್ಟಿ ಪ್ರಕಟಿಸಬೇಕು. ನಂತರದ 45 ದಿನಗಳಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆದೇಶಿಸಿತು.
ಬೆಳಗಾವಿ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡಿದೆಯಾದರೂ ಮೀಸಲು ಅಧಿಸೂಚನೆ ಪ್ರಕಟಿಸಿಲ್ಲ. ಹೀಗಾಗಿ ಸರ್ಕಾರ ಮುಂದಿನ ಎರಡು ತಿಂಗಳಲ್ಲಿ ಅಂತಿಮ ಮೀಸಲು ಅಧಿಸೂಚನೆ ಹೊರಡಿಸಬೇಕು. ಅದಾದ 45 ದಿನಗಳಲ್ಲಿ ಚನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆದೇಶಿಸಿತು.
ಓದಿ: ಪರೀಕ್ಷೆ ಮುಂದೂಡುವಂತೆ ಕೆಪಿಎಸ್ಸಿಗೆ ಪತ್ರ ಬರೆದ ಸಂಸದ ತೇಜಸ್ವಿ ಸೂರ್ಯ
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಡೆಸುವುದಕ್ಕೆ ಧಾರವಾಡ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ತಡೆಯಾಜ್ಞೆ ನೀಡಿದೆ. ಹೀಗಾಗಿ ಏಕಸದಸ್ಯ ಪೀಠ ತಡೆಯಾಜ್ಞೆ ತೆರವುಗೊಳಿಸಬೇಕು. ಹಾಗೆಯೇ ಪೀಠ ಅರ್ಜಿಯನ್ನು ಆದ್ಯತೆ ಮೇರೆಗೆ ವಿಚಾರಣೆ ನಡೆಸಿ ಶೀಘ್ರವಾಗಿ ಇತ್ಯರ್ಥಪಡಿಸಬೇಕು. ಬಳಿಕ ಚುನಾವಣೆ ನಡೆಸುವ ಸಂಬಂಧ ಸರ್ಕಾರ, ಆಯೋಗಗಳು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.
ಪ್ರಮಾಣ ಪತ್ರ ಸಲ್ಲಿಸಲು ನಿರ್ದೇಶನ: ಅವಧಿ ಪೂರ್ಣಗೊಂಡಿರುವ ರಾಜ್ಯದ ವಿವಿಧ 10 ನಗರಸಭೆ, 6 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆಸುವ ಪ್ರಕ್ರಿಯೆ ಯಾವ ಹಂತದಲ್ಲಿದೆ? ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವರ ಒಳಗೊಂಡ ಪ್ರಮಾಣಪತ್ರವನ್ನು 2021ರ ಜ. 15ರೊಳಗೆ ಸಲ್ಲಿಸಬೇಕು ಎಂದು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಜ. 18ಕ್ಕೆ ಮುಂದೂಡಿತು.
ಚುನಾವಣೆ ಬಾಕಿಯಿರುವ ಸ್ಥಳೀಯ ಸಂಸ್ಥೆಗಳು
ನಗರಸಭೆ - ರಾಮನಗರ, ದೊಡ್ಡಬಳ್ಳಾಪುರ, ಚನ್ನಪಟ್ಟಣ, ಭದ್ರಾವತಿ, ಶಿರಾ, ಚಿಕ್ಕಮಗಳೂರು, ಮಡಿಕೇರಿ, ಗದಗ-ಬೆಟಗೇರಿ, ಬೀದರ್, ಹೊಸಪೇಟೆ.
ಪುರಸಭೆ - ವಿಜಯಪುರ, ಬೇಲೂರು, ತರೀಕೆರೆ, ಬಂಕಾಪುರ, ಅಥಣಿ, ಅಣ್ಣಿಗೇರಿ, ಪಟ್ಟಣ ಪಂಚಾಯಿತಿ- ಗುಡಿಬಂಡೆ, ತೀರ್ಥಹಳ್ಳಿ.