ಬೆಂಗಳೂರು: ಉದ್ಯಾನವನ, ಸ್ಮಶಾನ, ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು ಐದು ವರ್ಷದಲ್ಲಿ ಸರ್ಕಾರ ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿ ಮಾಡದಿದ್ದಲ್ಲಿ ಕರ್ನಾಟಕ ನಗರ ಮತ್ತು ಪಟ್ಟಣ ಯೋಜನೆ ಸೆಕ್ಷನ್ 12(1)(ಸಿ) ಅನ್ವಯ ಆ ಜಾಗ ರದ್ದಾಗಲಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಬೆಂಗಳೂರಿನ ಜಯಮಹಲ್ ಮುಖ್ಯ ರಸ್ತೆಯಲ್ಲಿರುವ ಜಯಮಹಲ್ ಪ್ಯಾಲೇಸ್ ಹೋಟೆಲ್ ಮಾಲೀಕರಾದ ಹೆಚ್.ಹೆಚ್. ಜೋತೇಂದ್ರ ಸಿನ್ಹಾಜಿ ಮತ್ತು ಅವರ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಭೂಮಿಯನ್ನು ಪರಿಷ್ಕೃತ ಕ್ರಿಯಾ ಯೋಜನೆಯಡಿ 2007ರ ಜೂ.25ರಂದು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟು ಆದೇಶ ಹೊರಡಿಸಲಾಗಿದೆ. ಆ ಅವಧಿ 2012ರ ಜೂ.24ಕ್ಕೆ ಕೊನೆಗೊಂಡಿದೆ ಮತ್ತು ಆ ಭೂಮಿಯನ್ನು 5 ವರ್ಷದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಹಾಗಾಗಿ ಭೂ ಮಾಲೀಕರು ತಮ್ಮ ಭೂಮಿಯನ್ನು ಮರು ನಿಯೋಜಿಸಲು (ರಿ-ಡೆಸಿಗ್ನೇಟ್) ಮಾಡಲು ಮನವಿ ಮಾಡಬಹುದಾಗಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ, ನ್ಯಾಯಾಲಯ ಅರ್ಜಿದಾರರ ಭೂಮಿಯ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಯನ್ನು ಆಧರಿಸಿ ತಮ್ಮ ಭೂಮಿಯನ್ನು ಮರು ನಿಯೋಜಿಸುವ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಕಾರಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಬಹುದು, ಪ್ರಾಧಿಕಾರ 180 ದಿನಗಳಲ್ಲಿ ಆ ಮನವಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ. ಮಾಸ್ಟರ್ ಪ್ಲಾನ್ ಗಳಲ್ಲಿ ಈಗಾಗಲೇ ಆಗಿರುವ ಅಭಿವೃದ್ಧಿಗಳನ್ನು ಮತ್ತು ಉದ್ದೇಶಿರುವ ಅಭಿವೃದ್ಧಿ ಯೋಜನೆ ಎರಡನ್ನೂ ಸಹ ಒಳಗೊಂಡಿರಬೇಕು. ಈಗಾಗಲೇ ಆಗಿರುವ ಅಭಿವೃದ್ಧಿಗಳನ್ನು ಬದಲಾಯಸಲಾಗದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?: ಅರ್ಜಿದಾರರ ಭೂಮಿ, ಜಯಮಹಲ್ ಪ್ಯಾಲೇಸ್ ಪ್ರದೇಶವನ್ನು 1995ರಲ್ಲಿ ಅನುಮೋದಿಸಲಾದ 2011ರ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)ಯಲ್ಲಿ ವಸತಿ ಪ್ರದೇಶವೆಂದು ಘೋಷಿಸಲಾಗಿತ್ತು. ಆದರೆ 2007ರಲ್ಲಿ ಅನುಮೋದಿಸಲಾದ ಪರಿಷ್ಕೃತ ಮಾಸ್ಟರ್ ಪ್ಲಾನ್ 2015ರಲ್ಲಿ ಆ ಜಾಗವನ್ನು ಉದ್ಯಾನವನ ಮತ್ತು ಹಸಿರುಜಾಗ/ಕ್ರೀಡಾ ಉದ್ದೇಶ ಆಟದ ಮೈದಾನ, ಸ್ಮಶಾನ ಎಂದು ಮೀಸಲಿಡಲಾಗಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು, ತಮ್ಮ ಜಾಗದಲ್ಲಿ ಮೊದಲೇ ಹೋಟೆಲ್ ಇದ್ದು, ಅದು ವಾಣಿಜ್ಯ ಉದ್ದೇಶದ ಕಟ್ಟಡ ಹೊಂದಿದೆ. ಆ ವಿಚಾರ ಬಿಡಿಎಗೂ ತಿಳಿದಿದೆ. ಆದು ಪರಿಷ್ಕೃತ ಮಾಸ್ಟರ್ ಪ್ಲಾನ್ ನಲ್ಲಿ ಆ ಜಾಗವನ್ನು ಪಾರ್ಕ್ ಮತ್ತು ಮುಕ್ತ ಪ್ರದೇಶವೆಂದು ಘೋಷಿಸಿದೆ. ಇದು ಕಾನೂನು ಬಾಹಿರ ಎಂದು ಆಕ್ಷೇಪಿಸಿದ್ದರು.
ಆದರೆ, ಬಿಡಿಎ ಆ ಜಾಗವನ್ನು ಸ್ವಧೀನಪಡಿಸಿಕೊಂಡಿರಲಿಲ್ಲ. ಹಾಗಾಗಿ ಆ ಮೀಸಲಿಟಿದ್ದ ಜಾಗದ ಅವಧಿ ಕೊನೆಗೊಂಡಿರುವ ಕಾರಣ, ಸಹಜವಾಗಿಯೇ ಕರ್ನಾಟಕ ನಗರ ಮತ್ತು ಪಟ್ಟಣ ಯೋಜನೆ ಅನ್ವಯ ಮೀಸಲು ಆದೇಶ ರದ್ದಾಗಲಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಲಗುಂಡಿ ಸ್ವಚ್ಛತೆಗೆ ತಳ ಸಮುದಾಯದವರ ಬಳಕೆ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್