ಬೆಂಗಳೂರು : ನಗರದಲ್ಲಿ ಮಕ್ಕಳನ್ನು ಕಳ್ಳಸಾಗಣೆ ಮಾಡುತ್ತಿರುವ ಮತ್ತು ಭಿಕ್ಷಾಟನೆಗೆ ದೂಡುತ್ತಿರುವ ದಂಧೆ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ(ಕೆಎಸ್ಎಲ್ಎಸ್ಎ) ನೀಡಿರುವ ವರದಿಯ ನಗರ ಪೊಲೀಸ್ ಆಯುಕ್ತರಿಗೆ ಒದಗಿಸಿ. ಹಾಗೆಯೇ ಈ ಸಂಬಂಧ ಕೂಡಲೇ ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ನಗರದ ರಸ್ತೆ ಬದಿ ಹಾಗೂ ಸಿಗ್ನಲ್ಗಳಲ್ಲಿ ಆಟಿಕೆ ಮಾರಾಟ ಮಾಡಲು ಬಳಕೆಯಾಗುತ್ತಿರುವ ಮಕ್ಕಳ ಪುನರ್ವಸತಿ ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮಕ್ಕಳ ಕಳ್ಳಸಾಗಣೆ ಹಾಗೂ ಭಿಕ್ಷಾಟನೆಗೆ ದೂಡುತ್ತಿರುವ ವಿಚಾರವಾಗಿ ತುರ್ತು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಹಿಂದಿನ ವಿಚಾರಣೆ ವೇಳೆ ನಿರ್ದೇಶಿಸಲಾಗಿತ್ತು.
ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಕೆಎಸ್ಎಲ್ಎಸ್ಎ ಸಮೀಕ್ಷೆ ಪ್ರಕಾರ ನಗರದಲ್ಲಿ 720 ಅಪ್ರಾಪ್ತ ಮಕ್ಕಳು ಭಿಕ್ಷಾಟನೆ ಮಾಡುತ್ತಿದ್ದಾರೆ. ಅದರಲ್ಲಿ 27 ಮಕ್ಕಳನ್ನು ಮಾಫಿಯಾ ನಿಯಂತ್ರಿಸುತ್ತಿರುವ ಗುಮಾನಿ ವ್ಯಕ್ತಪಡಿಸಿದೆ. ಈ ವರದಿ ಆಧರಿಸಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿತು.
ಅಲ್ಲದೇ, ಕೆಎಸ್ಎಲ್ಎಸ್ಎ ವರದಿ ಮತ್ತು ವರದಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲು ಹೈಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಒದಗಿಸಬೇಕು. ಹಾಗೆಯೇ ಈ ಸಂಬಂಧ ಅಗತ್ಯ ಕ್ರಮಗಳನ್ನು ಜರುಗಿಸಲು ಆಯುಕ್ತರಿಗೆ ಸೂಚಿಸಬೇಕು.
ಮುಂದಿನ ವಿಚಾರಣೆ ವೇಳೆ ಆಯುಕ್ತರು ಯಾವೆಲ್ಲಾ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿತು. ಹಾಗೆಯೇ, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆಯುಕ್ತರ ಖುದ್ದು ಹಾಜರಿಗೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಅರ್ಜಿಯ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್ಗೆ ವರದಿ ಸಲ್ಲಿಸಿದ್ದ ಕೆಎಸ್ಎಲ್ಎಸ್ಎ, ನಗರದ ರಸ್ತೆ ಬದಿ ಆಟಿಕೆ-ಹೂ ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.
ಇವರಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 27 ಮಕ್ಕಳನ್ನು ಮಾಫಿಯಾ ನಿಯಂತ್ರಣ ಮಾಡುತ್ತಿರುವ ಗುಮಾನಿ ಇದೆ ಎಂದು ತಿಳಿಸಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೀಠ, ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.