ಬೆಂಗಳೂರು: ರಾಜ್ಯದಲ್ಲಿ ಸಂಪುಟ ದರ್ಜೆಯ ಸ್ಥಾನಮಾನಗಳನ್ನು ನೀಡಿ, ರಾಜಕೀಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳ ಸಲಹೆಗಾರರ ಹುದ್ದೆ ಸೃಷ್ಟಿ ಮಾಡಿರುವ ಕ್ರಮವನ್ನೂ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.ಅಲ್ಲದೆ, ಪ್ರತಿವಾದಿವಳಿಗೂ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ಆದೇಶಿಸಿದೆ.
ಅರ್ಜಿದಾರರು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿಎನ್ ಜೀವರಾಜ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿರುವುದು. ಬೇಲೂರು ಸುದರ್ಶನ್ ಅವರನ್ನು ಇ-ಕಾಮರ್ಸ್ ವಿಭಾಗದ ಸಲಹೆಗಾರರಾಗಿ ಹಾಗೂ ಕೇದಾರನಾಥ ಮದ್ದ ಅವರನ್ನು ವಾಣಿಜ್ಯ ಕೈಕಾರಿಕಾ ಇಲಾಖೆಯ ಸಲಹೆಗಾರರನ್ನಾಗಿ ನೇಮಕ ಮಾಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜಕೀಯ ಕಾರ್ಯದರ್ಶಿಗಳಜ ಹಾಗೂ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಮಂಡಲದಲ್ಲಿ ಮಂತ್ರಿಗಳನ್ನು ಮಿತಿಗೊಳಿಸುವ ಸಂವಿಧಾನದ ಪರಿಚ್ಛೇದ 164(1)(ಎ) ಗೆ ವಿರುದ್ದವಾಗಿದೆ ಎಂದು ವಾದ ಮಂಡಿಸಿದರು.
ಕ್ಯಾಬಿನೆಟ್ ಹುದ್ದೆಗೆ ಸಮಾನ ಅವಕಾಶ: ಅಲ್ಲದೆ, ಸರ್ಕಾರದ ಈ ಕ್ರಮವೂ, ನೇಮಕಾತಿಗಳಲ್ಲಿ ಸರ್ಕಾರಕ್ಕೆ ನೀಡಿರುವ ಅಧಿಕಾರದ ಉಲ್ಲಂಘನೆಯಾಗಿದೆ. ಅಲ್ಲದೆ, ಇದು ನೈಜ ಆಡಳಿತ ಗುರಿ ಸಾಧಿಸಲು ವಿರುದ್ದವಾಗಿದೆ. ಸರ್ಕಾರದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಲಾಬಿ ಮಾಡುವವರನ್ನು ಕ್ಯಾಬಿನೆಟ್ ಹುದ್ದೆಗೆ ಸಮಾನ ಅವಕಾಶ ನೀಡುವ ತಂತ್ರಗಾರಿಕೆಯಾಗಿದೆ. ಈ ಬೆಳವಣಿಗೆ ಸಂವಿಧಾನದ ಪರಿಚ್ಛೇದ 162 ಕ್ಕೆ ವಿರುದ್ಧವಾಗಿದೆ. ಜತೆಗೆ ಸರ್ಕಾರದ ಭೊಕ್ಕಸಕ್ಕೆ ಹೊರೆಯಾಗಲಿದೆ. ಹೀಗಾಗಿ ನೂತನ ಸೃಷ್ಟಿ ಮಾಡಿರುವ ಹುದ್ದೆಗಳನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ:ಪಂಚಮಸಾಲಿ ಮೀಸಲಾತಿ ಪ್ರಶ್ನಿಸಿರುವ ಅರ್ಜಿ ವಜಾ ಕೋರಿ ಸರ್ಕಾರದಿಂದ ಹೈಕೋರ್ಟ್ಗೆ ಮನವಿ