ಬೆಂಗಳೂರು: ಬೋಧನಾ ಶುಲ್ಕ ಪಾವತಿಸದ ಕಾರಣಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷೆ ಬರೆಯಲು ಸಮ್ಮತಿ ನೀಡದ ಖಾಸಗಿ ವಿವಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ಕಲ್ಪಿಸಿ ಎಂದು ಸೂಚನೆಯನ್ನೂ ನೀಡಿದೆ.
ಈ ಕುರಿತಂತೆ ನಗರದ ಅಮರೇಶ್ವರ ಕಾರಟಗಿ ಎಂಬುವರ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಇದೇ ವೇಳೆ ವಿವಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.
ಓದಿ: ಪಾದಯಾತ್ರೆ ಕೈ ಬಿಡಲು ಕೋರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಪತ್ರ
ಪ್ರಕರಣದ ಹಿನ್ನೆಲೆ: ವಿದ್ಯಾರ್ಥಿ ಅಮರೇಶ್ವರ ಕಾರಟಗಿ ಬೆಂಗಳೂರಿನ ಹೊರವಲಯದ ಯಲಹಂಕದ ರೇವಾ ಖಾಸಗಿ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಬಿ.ಟೆಕ್ ಪದವಿ ವಿದ್ಯಾರ್ಥಿಯಾಗಿ 2018–19ರಲ್ಲಿ ಪ್ರವೇಶ ಪಡೆದಿದ್ದರು. 95 ಸಾವಿರ ಬೋಧನಾ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ವಿಶ್ವವಿದ್ಯಾಲಯ ವಿದ್ಯಾರ್ಥಿಗೆ ಏಳನೇ ಸೆಮಿಸ್ಟರ್ ಪರೀಕ್ಷೆಗೆ ಹಾಲ್ ಟಿಕೆಟ್ ನೀಡಿರಲಿಲ್ಲ.
ಈ ಹಿನ್ನೆಲೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿ, ಕೋವಿಡ್ ಪರಿಣಾಮ ಶುಲ್ಕ ಪಾವತಿಸಲು ತಕ್ಷಣಕ್ಕೆ ಆಗುತ್ತಿಲ್ಲ. ಸಮಯಾವಕಾಶ ಕೇಳಿದರೂ ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ. ಆದ್ದರಿಂದ ಹಾಲ್ ಟಿಕೆಟ್ ನೀಡಲು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ವಿದ್ಯಾರ್ಥಿ ಮನವಿ ಸ್ವೀಕರಿಸಿದ ಹೈಕೋರ್ಟ್ ವಿವಿಗೆ ತುರ್ತು ನೋಟೀಸ್ ಜಾರಿ ಮಾಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಎಂದು ಹೇಳಿದೆ.