ಬೆಂಗಳೂರು: ಪತಿಯಿಂದ ದೂರದಲ್ಲಿರುವ ಪತ್ನಿ ಪ್ರತ್ಯೇಕವಾಗಿ ನೆಲೆಸಲು ಹೆಚ್ಚುವರಿಯಾಗಿ 5 ಸಾವಿರ ರೂ.ಗಳ ಪರಿಹಾರ ನೀಡುವಂತೆ ಹೈಕೋರ್ಟ್ ಪತಿಗೆ ಸೂಚನೆ ನೀಡಿದೆ. ಪತಿ ಹಾಗೂ ಆತನ ಎರಡನೇ ಪತ್ನಿಯ ಕುಟುಂಬದ ಇತರ ಸದಸ್ಯರು ವಾಸಿಸುತ್ತಿರುವ ಮನೆಯಲ್ಲಿಯೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವಂತೆ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮೊದಲನೇ ಪತ್ನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರಿದ್ದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಆದೇಶವನ್ನು ತಿದ್ದುಪಡಿ ಮಾಡಿ ಮೊದಲ ಪತ್ನಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲು ಮಾಸಿಕ 5 ಸಾವಿರ ರೂ. ಪಾವತಿ ಮಾಡುವಂತೆ ಸೂಚಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯದಂತೆ ಶೈಲಜಾ ಅವರು ಎರಡನೇ ಪತ್ನಿ ಮತ್ತವರ ಕುಟುಂಬ ಸದಸ್ಯರೊಂದಿಗೆ ಒಂದೇ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡುವುದು ಪ್ರಯೋಗಿಕವಾಗಿ ಕಾರ್ಯಸಾಧುವಿಲ್ಲ. ಇದರಿಂದ ಕುಟುಂಬದ ಇತರ ಸದಸ್ಯರ ಜೊತೆಗೆ ಅಸಮಾಧಾನ ಏರ್ಪಟ್ಟು, ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಆಕೆ ಪ್ರತ್ಯೇಕ ಸ್ಥಳದಲ್ಲಿ ವಾಸ ಮಾಡುವುದು ಸೂಕ್ತವಾಗುತ್ತದೆ. ಅದಕ್ಕಾಗಿ ಪತಿಯು ಆಕೆಗೆ ಮಾಸಿಕ 5 ಸಾವಿರ ರೂ. ಪಾವತಿಸಲು ಸೂಚನೆ ನೀಡಿ ನಿರ್ದೇಶನ ನೀಡಿದೆ.
ಅಲ್ಲದೇ, ಮಾಸಿಕ ಐದು ಸಾವಿರ ರೂ. ಪಾವತಿಯಿಂದ ಒಂದು ಕೊಠಡಿಗಿಂತ ಹೆಚ್ಚಿನ ಸ್ಥಳಾವಕಾಶವಿರುವ ಪರ್ಯಾಯ ಜಾಗ ಹುಡುಕಿಕೊಳ್ಳಲು ಶೈಲಜಾಗೆ ಸಾಧ್ಯವಾಗುತ್ತದೆ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶದಂತೆ ಶೈಲಜಾ ಅವರಿಗೆ ಮಾಸಿಕ 6 ಸಾವಿರ ರೂ. ಜೀವನಾಂಶ ನೀಡಬೇಕು. ಜೊತೆಗೆ ಚಿತ್ತಗೊಪ್ಪ ಅಥವಾ ಬೀದರ್ನಲ್ಲಿ ತನ್ನಿಷ್ಟದಂತೆ ಪ್ರತ್ಯೇಕ ವಸತಿ ಸೌಲಭ್ಯ ಹೊಂದಲು ಹೆಚ್ಚುವರಿಯಾಗಿ 5 ಸಾವಿರ ರೂ. ನೀಡಬೇಕು ಎಂದು ಪತಿಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು ? : ರವಿ ಎಂಬುವರು ಅವರು ಶೈಲಜಾ (ಎಲ್ಲರ ಹೆಸರುಗಳನ್ನು ಬದಲಾಯಿಸಲಾಗಿದೆ) ಎಂಬಾಕೆಯನ್ನು ಮದುವೆಯಾಗಿದ್ದು, ಸದ್ಯ ಆಕೆಯಿಂದ ದೂರವಾಗಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣಾ ಕಾಯ್ದೆಯಡಿ ಶೈಲಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು 6 ಸಾವಿರ ರೂ. ಜೀವನಾಂಶ ಪಾವತಿಸಲು ಪತ್ನಿಗೆ ಆದೇಶಿಸಿದೆ. ಜೊತೆಗೆ ಎರಡನೇ ಪತ್ನಿ ಮತ್ತವರ ಕುಟುಂಬ ಸದಸ್ಯರು ನೆಲೆಸಿರುವ ಮನೆಯಲ್ಲಿಯೇ ವಾಸಿಸಲು ಶೈಲಜಾರಿಗೂ ಒಂದು ಕೊಠಡಿ ಕಲ್ಪಿಸಲು ವಿಚಾರಣಾ ನ್ಯಾಯಾಲಯ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಶೈಲಜಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅಂಗವೈಕಲ್ಯಕ್ಕೆ ತುತ್ತಾದವರು ಸಲ್ಲಿಸುವ ದೂರನ್ನು ವಿಶೇಷಚೇತನರ ಹಕ್ಕುಗಳ ಕಾಯಿದೆಡಿ ಪರಿಗಣಿಸಬೇಕು: ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿ ವಿಶೇಷಚೇತನರ ಹಕ್ಕುಗಳ ಕಾಯಿದೆಯಡಿ ನಿರ್ದಿಷ್ಟ ದೂರು ನೀಡಿದಾಗ ಅದನ್ನು ಅದೇ ಕಾಯಿದೆಯಡಿ ಪರಿಗಣಿಸಬೇಕೇ ಹೊರತು ಸಾಮಾನ್ಯ ಕಾಯಿದೆಯಡಿ ಅಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಧಾರವಾಡದ ದೃಷ್ಟಿಚೇತನ ಬಸವಾನಂದ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಈ ಕುರಿತು ಪೊಲೀಸರು ಅರ್ಜಿದಾರರ ದೂರು ತಿರಸ್ಕರಿಸಿ ನೀಡಿದ್ದ ಹಿಂಬರಹವನ್ನು ನ್ಯಾಯಾಲಯ ರದ್ದು ಮಾಡಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಅರ್ಜಿದಾರರಿಗೆ ಮಾನನಷ್ಟ ಮೊಕದ್ದಮೆ ಹೂಡುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಪೊಲೀಸರು ತಪ್ಪಾಗಿ ಅರ್ಜಿದಾರರ ದೂರನ್ನು ತಿರಸ್ಕರಿಸಿದ್ದಾರೆ.
ಆದರೆ, ಅರ್ಜಿದಾರರು ತನ್ನ ವಿರುದ್ಧ ವ್ಯಕ್ತಿಯೊಬ್ಬರು ವಿಶೇಷ ಚೇತನರ ಕಾಯಿದೆ 2016ರ ಸೆಕ್ಷನ್ 92ರ ಪ್ರಕಾರ ಅಪಮಾನ, ದೌರ್ಜನ್ಯ ಎಸಗಿದ್ದಾರೆ, ಹಾಗಾಗಿ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಪೊಲೀಸರು ಅದೇ ಕಾಯಿದೆಯಡಿಯೇ ಕ್ರಮ ಜರುಗಿಸಬೇಕಿತ್ತು ಎಂದು ನ್ಯಾಯಪೀಠ ತಿಳಿಸಿದೆ. ವಿಶೇಷಚೇತನರ ಕಾಯಿದೆ ಸೆಕ್ಷನ್ 92ರಡಿ ಯಾವುದೇ ವ್ಯಕ್ತಿ ವಿಶೇಷಚೇತನರನ್ನು ಉದ್ದೇಶಪೂರ್ವಕವಾಗಿ ಅಪಮಾನಿಸಿದರೆ ಅಂತಹ ವ್ಯಕ್ತಿಯನ್ನು ದಂಡಿಸಬಹುದಾಗಿದೆ. ಆದರೆ, ಪೊಲೀಸರು ಆ ಕಾಯಿದೆಯಡಿ ಕ್ರಮ ಜರುಗಿಸುವುದು ಬಿಟ್ಟು, ಅರ್ಜಿದಾರರಿಗೆ ಮಾನನಷ್ಟ ಮೊಕದ್ದಮೆ ಹೂಡಿ ಎಂದು ಹಿಂಬರಹ ನೀಡಿರುವುದು ಸರಿಯಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ ಏನು ? : ಅರ್ಜಿದಾರರು 2022ರ ಸೆ.15ರಂದು ಧಾರವಾಡದ ಸಿಇಎನ್ (ಸೈಬರ್, ಮಾದಕ ದ್ರವ್ಯಮತ್ತಿತರ ಅಪರಾಧ) ಪೊಲೀಸ್ ಠಾಣೆಯಲ್ಲಿ ವಿಶೇಷ ಚೇತನರ ಹಕ್ಕು ಕಾಯಿದೆಯಡಿ ದೂರು ನೀಡಿದ್ದರು. ಆದರೆ, ಪೊಲೀಸರು ಅದನ್ನು ತಿರಸ್ಕರಿಸಿದ್ದರು. ಹಾಗಾಗಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರ ಸುರಕ್ಷತೆ ಚಾಲಕರ ಮೇಲಿರಲಿದೆ: ಹೈಕೋರ್ಟ್