ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರನ್ನು ನೇಮಕ ಮಾಡುವ ಸಲುವಾಗಿ ಈ ಹಿಂದೆ ವಿವಿಧ ನ್ಯಾಯಾಲಯಗಳು ನೀಡಿರುವ ಆದೇಶಗಳಂತೆ ಅಗತ್ಯ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತಮ್ಮ ಅಧಿಕಾರಾವಧಿಯನ್ನು ಮೊಟಕುಗೊಳಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಕೆಎಸ್‌ಪಿಸಿಬಿ ಅಧ್ಯಕ್ಷ ಶಾಂತ್ ಎ ತಿಮ್ಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಇವರ ಅರ್ಜಿ ಸಹಿತ ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕ ಸಲುವಾಗಿ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಮಾರ್ಗಸೂಚಿ ತಿದ್ದುಪಡಿಗೆ ಸೂಚನೆ: ಕೆಎಸ್‌ಪಿಸಿಬಿ ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳ ನೇಮಕ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ ಹಾಗೂ ಸುಪ್ರೀಂಕೋರ್ಟ್, ವಿವಿಧ ಹೈಕೋರ್ಟ್‌ಗಳ ಆದೇಶಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದ ಮಾರ್ಗಸೂಚಿಗಳನ್ನು ಅಗತ್ಯ ರೀತಿ ತಿದ್ದುಪಡಿ ಮಾಡಬೇಕು ಎಂದು ಸೂಚನೆ ನೀಡಿದೆ.
ಅಲ್ಲದೆ, ಅರ್ಜಿದಾರರ ಶಾಂತ್ ಎ ತಿಮ್ಮಯ್ಯ ಅವರ ನೇಮಕಾತಿ ಅಮಾನ್ಯಗೊಳಿಸಿಲ್ಲ. ಅವರ ಸೇವಾವಧಿಯೂ 2024 ರ ನವೆಂಬರ್ 4ರ ವರೆಗೂ ಇರಲಿದೆ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿಯೂ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, 2024ಕ್ಕೆ ಶಾಂತ್ ತಿಮ್ಮಯ್ಯ ಅಧಿಕಾರದ ಅವಧಿ ಮುಕ್ತಾಯ ಆಗಬೇಕಿತ್ತು. ಇದನ್ನು 2022ಕ್ಕೆ ಸೀಮಿತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಹೈಕೋರ್ಟ್ ಹಿಂದೆ ಮಾರ್ಗಸೂಚಿ ಸರಿಯಿರಲಿಲ್ಲ ಎಂದು ಆದೇಶ ಮಾಡಿತ್ತು. ಆ ಮಾರ್ಗಸೂಚಿಯನ್ನು ಪುನರ್ ರಚಿಸಿ, ನಿಯಮ ರೂಪಿಸಲಾಗಿದೆ. ಇದರ ಅನ್ವಯ ತಿದ್ದುಪಡಿ ಆದೇಶ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಅರ್ಜಿದಾರರ ಪರ ವಕೀಲ ಡಿ ಆರ್ ರವಿಶಂಕರ್, ಶಾಂತ್ ತಿಮ್ಮಯ್ಯ ಅವರ ನೇಮಕಾತಿಯಲ್ಲಿ ನಿಯಮ ಪಾಲಿಸಲಾಗಿದೆ. ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ. ಈ ನಿಟ್ಟಿನಲ್ಲಿ ಅಧಿಕಾರ ಮೊಟಕುಗೊಳಿಸಿ ಹೊರಡಿಸಿರುವ ಆದೇಶ ರದ್ದು ಮಾಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ ಏನು ? ಕೆಎಸ್ಪಿಸಿಬಿ ಅಧ್ಯಕ್ಷರನ್ನಾಗಿ 05.03.2019 ರಂದು ಜಯರಾಂ ಎಂಬವರನ್ನು 04.03.2022ರ ವರೆಗೆ ನೇಮಕ ಮಾಡಲಾಗಿತ್ತು. ಜಯರಾಂ ಅವರು 20.06.2019ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷರ ಹುದ್ದೆಗೆ ಉಸ್ತುವಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಆನಂತರ ನೇಮಕಗೊಂಡವರು ಮೂರರಿಂದ ಆರು ತಿಂಗಳವರೆಗೆ ಹುದ್ದೆಯಲ್ಲಿದ್ದರು.
15.11.2021ರಂದು ಶಾಂತ್ ತಿಮ್ಮಯ್ಯ ಅವರನ್ನು ಕೆಎಸ್ಪಿಸಿಬಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರ ಅವಧಿಯು 04.03.2022ರ ಕ್ಕೆ ಬದಲಾಗಿ 14.11.2024ಕ್ಕೆ ಮುಗಿಯುತ್ತದೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಈ ಪ್ರಮಾದವನ್ನು ಸರಿಪಡಿಸಲಾಗಿದ್ದು, ಶಾಂತ್ ತಿಮ್ಮಯ್ಯ ಅವರ ಅಧ್ಯಕ್ಷಿಯ ಅವಧಿಯು 04.03.2022ಕ್ಕೆ ಅಂತ್ಯವಾಗಿದೆ ಎಂದು ತಿದ್ದುಪಡಿಯಲ್ಲಿ ವಿವರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಶಾಂತ್ ಎ ತಿಮ್ಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂಓದಿ:ಸಿಬಿಐಗೆ ತನಿಖೆಗೆ ನೀಡಿದ್ದ ಕ್ರಮವನ್ನು ಪ್ರಶ್ನಿಸಿದ್ದ ಮೇಲ್ಮನವಿ ಹಿಂಪಡೆದ ಡಿಕೆಶಿ; ಅನುಮತಿ ನೀಡಿದ ಹೈಕೋರ್ಟ್