ಬೆಂಗಳೂರು: ನಗರದಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ. ಎಷ್ಟು ಮರಗಳನ್ನು ಸ್ಥಳಾಂತರಿಸಲಾಗಿದೆ ಎಂಬುದರ ಕುರಿತು ಮಾಹಿತಿಯುಳ್ಳ ಸಂಕ್ಷಿಪ್ತ ವರದಿ ಸಲ್ಲಿಸಲು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮಕ್ಕೆ(ಬಿಎಂಆರ್ಸಿಎಲ್) ಹೈಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರ ತಜ್ಞ ದತ್ತಾತ್ರೇಯ ಟಿ ದೇವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಬಿಎಂಆರ್ಸಿಎಲ್ ಅನುಪಾಲನಾ ವರದಿ ಸಲ್ಲಿಸಿದ್ದು, ಅವುಗಳು ಬೃಹತ್ ಗಾತ್ರದಲ್ಲಿವೆ. ಪ್ರತಿವಾದಿಗಳು ವರದಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನು ನವೆಂಬರ್ 18ರ ಒಳಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದಿಸಿ, 10 ಸಾವಿರ ಗಿಡ ನೆಡಲಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ. ಆದರೆ, ಅವುಗಳ ಸ್ಥಿತಿಗತಿ ಏನಾಗಿದೆ ಎಂಬ ಯಾವುದೇ ಮಾಹಿತಿ ನೀಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮರಗಳನ್ನು ಕಡಿಯಬೇಕಾದರೆ ಕಡಿಯಬಹುದು. ಆದರೆ, ಒಂದು ಮರ ಕಡಿದರೆ ಅದಕ್ಕೆ ಪರ್ಯಾಯವಾಗಿ 10 ಗಿಡ ನೆಡಬೇಕು. ಹೀಗೆ ಮಾಡುವುದರಿಂದ ನಗರದ ಹಸಿರು ಹೊದಿಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಮೂಲಕ ಪರಿಸರ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿದಂತಾಗುತ್ತದೆ. ಪ್ರಜ್ಞಾಪೂರ್ವಕ ಕ್ರಮದ ಮೂಲಕ ನೀವು (ಬಿಎಂಆರ್ಸಿಎಲ್) ಅದನ್ನು ಮಾಡಿ ತೋರಿಸಬೇಕು” ಎಂದು ಪೀಠ ಸೂಚನೆ ನೀಡಿತು.
ಇದನ್ನೂ ಓಡಿ: ಮೈಸೂರು ರಸ್ತೆಯಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಹೈಕೋರ್ಟ್ ಸಮ್ಮತಿ