ಬೆಂಗಳೂರು: ಕಾವೇರಿ ನಿರಾವರಿ ನಿಗಮದ ಅಧ್ಯಕ್ಷರಾಗಿದ್ದ ಚಿಕ್ಕರಾಯಪ್ಪನವರ ಅಕ್ರಮ ಆಸ್ತಿ ಸಕ್ರಮಗೊಳಿಸಲು ನೆರವಾದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹಾಗೂ ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಆರ್. ಸೀತಾರಾಮ್ ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತು. ತಮ್ಮ ವಿರುದ್ಧದ ಪ್ರಕರಣ ರದ್ದತಿ ಕೋರಿ ಸೀತಾರಾಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪ ಸಂಬಂಧ ಎಸಿಬಿ 2018ರ ಮೇ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಎರಡು ನೋಟಿಸ್‌ಗಳನ್ನು ನೀಡಿದೆ. ಮೊದಲ ನೋಟಿಸ್‌ಗೆ ಪ್ರತಿಕ್ರಿಯಿಸಿ, ಚಿಕ್ಕರಾಯಪ್ಪ (ಪ್ರಕರಣದ ಮೊದಲ ಆರೋಪಿ) ಅವರ ಮಗಳ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ, ಎರಡನೇ ನೋಟಿಸ್‌ಗೆ ಸಾಲ ಮಂಜೂರು ಮಾಡಿದ್ದ ಸೊಸೈಟಿ ನಿಷ್ಕ್ರಿಯವಾಗಿದ್ದು, ಹಳೆಯ ದಾಖಲೆಗಳು ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆ ಅತ್ಯಂತ ವಿಚಿತ್ರವೂ ಮತ್ತು ಆಘಾತಕಾರಿಯಾಗಿದೆ ಎಂದು ಪೀಠ ಹೇಳಿತು.
ಸೊಸೈಟಿ ಸ್ವಾತಂತ್ರ ಸಂಸ್ಥೆಯಾಗಿದ್ದು, ಸೀತಾರಾಮ್ ಅವರು ಸೊಸೈಟಿಯ ಅಧ್ಯಕ್ಷರಾಗಿ 50 ಲಕ್ಷ ರೂ.ಗಳ ಚೆಕ್‌ಗೆ ಸಹಿ ಹಾಕಿದ್ದಾರೆ. ಈ 50 ಲಕ್ಷ ರೂಗಳು ಎಲ್ಲಿಂದ ಬಂದಿದೆ, ವಿಶೇಷವಾಗಿ ಕೇವಲ ಚಿಕ್ಕರಾಯಪ್ಪ ಮಗಳ ಶಿಕ್ಷಣಕ್ಕಾಗಿ ಬಡ್ಡಿ ರಹಿತ ಶೈಕ್ಷಣಿಕ ಸಾಲವನ್ನು ನೀಡಲು ಏಕೆ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಸಂಬಂಧಿಸಿದಂತೆ ಸೂಕ್ತ ವಿವರಣೆ ನೀಡಿಲ್ಲ. ಪ್ರಸ್ತುತ ಸೊಸೈಟಿ ನಿಷ್ಕ್ರಿಯೆಗೊಂಡಿದೆ. ಆದರೂ, ನ್ಯಾಯಾಲಯಕ್ಕೆ ಹಣ ವಹಿವಾಟು ನಡೆಸಿರುವ ಸಂಬಂಧ ದಾಖಲೆಗಳು ಅತ್ಯಂತ ಮುಖ್ಯವಾಗಿರುತ್ತದೆ. ಈ ಎಲ್ಲ ಗಂಭೀರವಾದ ಪ್ರಶ್ನೆಗಳಿಗೆ ನ್ಯಾಯಾಲಯಕ್ಕೆ ಸೂಕ್ತ ರೀತಿಯ ಪ್ರತಿಕ್ರಿಯೆ ಅಗತ್ಯವಿದ್ದು, ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಟಿ.ಎನ್. ಚಿಕ್ಕರಾಯಪ್ಪ ಅವರು ಕಾವೇರಿ ನಿರಾವರಿ ನಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಅಕ್ರಮ ಆಸ್ತಿ ಗಳಿಕೆ ಸಂಬಂಧ ಆರೋಪ ಎದುರಾಗಿತ್ತು. ಈ ಕುರಿತಂತೆ ಚಿಕ್ಕರಾಯಪ್ಪ ಮತ್ತು ಅವರ ಆಪ್ತರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಸುಮಾರು 3.58 ಕೋಟಿ ರೂ.ಗಳ ಅಕ್ರಮ ಆಸ್ತಿ ವಶಕ್ಕೆ ಪಡೆದಿತ್ತು.
ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲನೆ ವೇಳೆ ಅರ್ಜಿದಾರ ಎಂ.ಆರ್. ಸೀತಾರಾಮ್ ಅಧ್ಯಕ್ಷರಾಗಿದ್ದ ಎಂ.ಎಸ್. ರಾಮಯ್ಯ ಎಜುಕೇಷನ್ ಸೊಸೈಟಿಯಿಂದ ಚಿಕ್ಕರಾಯಪ್ಪ ಮಗಳ ಸ್ನಾತಕೋತರ ವೈದ್ಯಕೀಯ ಕೋರ್ಸ್‌ಗೆ ಶುಲ್ಕವಾಗಿ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿಗೆ 50 ಲಕ್ಷ ರು.ಗಳ ಪಾವತಿ ಸಂಬಂಧದ ದಾಖಲೆಗಳು ಪತ್ತೆಯಾಗಿದ್ದವು. ಈ ಮೊತ್ತವನ್ನು ಚಿಕ್ಕರಾಯಪ್ಪ ಅವರ ಮಗಳ ಎಂಡಿ ಕೋರ್ಸ್‌ಗಾಗಿ ಬಡ್ಡಿರಹಿತವಾಗಿ ಸಾಲ ನೀಡಲಾಗಿದೆ ಎಂಬುದಾಗಿ ವಿವರಿಸಲಾಗಿತ್ತು.
ಈ ಸಂಬಂಧ ವಿವರಣೆ ಕೋರಿ ಎಸಿಬಿ ಅಧಿಕಾರಿಗಳು 2018ರ ಮೇ 13 ರಂದು ಎಂ.ಎಸ್. ರಾಮಯ್ಯ ಎಜುಕೇಶನ್ ಸೊಸೈಟಿಗೆ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೊಸೈಟಿ, ಚಿಕ್ಕರಾಯಪ್ಪ ಅವರ ಮಗಳ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲ ನೀಡಿರುವುದಾಗಿ ತಿಳಿಸಿತ್ತು. ಮುಂದುವರೆದ ಭಾಗವಾಗಿ ಚಿಕ್ಕರಾಯಪ್ಪ ಮಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಸಂಪೂರ್ಣ ವಿವರಣೆ ನೀಡುವಂತೆ ಎಸಿಬಿ 2018ರ ಏಪ್ರಿಲ್ 27 ರಂದು ಮತ್ತೊಂದು ನೋಟಿಸ್ ಜಾರಿ ಮಾಡಿತ್ತು.
ಇದಕ್ಕೆ ಉತ್ತರಿಸಿದ್ದ ರಾಮಯ್ಯ ಶಿಕ್ಷಣ ಸಂಸ್ಥೆ, ಇದೀಗ ಸಾಲ ನೀಡಿರುವ ಸೊಸೈಟಿ ನಿರ್ಜೀವವವಾಗಿದೆ. 2011-12ನೇ ಸಾಲಿನಲ್ಲಿ ನಡೆಯುತ್ತಿದ್ದ ಕಾಲೇಜನ್ನು ನಿವೇಶನ ಸಹಿತ ಮಾರಾಟ ಮಾಡಲಾಗಿದೆ. ಅಲ್ಲದೆ, ಪ್ರಸ್ತುತ ಕಚೇರಿ ನಡೆಸುತ್ತಿಲ್ಲ. ಸಿಬ್ಬಂದಿಯೂ ಇಲ್ಲ. ಹೀಗಾಗಿ ಹಳೆಯ ದಾಖಲೆಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಲೋಕಾಯುಕ್ತ( ಎಸಿಬಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಬಳಿಕ) ಪೊಲೀಸರು ಪ್ರಕರಣದಲ್ಲಿ ಸಿತಾರಾಮ್ ಅವರನ್ನು ಮೂರನೇ ಆರೋಪಿಯನ್ನಾಗಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ಮತ್ತು ವಿಚಾರಣಾ ನ್ಯಾಯಾಲಯದ ನಡೆಸುತ್ತಿರುವ ವಿಚಾರಣೆ ರದ್ದು ಕೋರಿ ಸೀತಾರಾಮ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಸಂಗೀತ ಬಳಕೆ; ಎಫ್ಐಆರ್ ವಜಾ ಕೋರಿದ ಕಾಂಗ್ರೆಸ್ ಅರ್ಜಿ ತಿರಸ್ಕೃತ