ಬೆಂಗಳೂರು: ನಗರಸಭೆ ಬೆನ್ನಲ್ಲೇ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಮೀಸಲಾತಿ ಅಧಿಸೂಚನೆ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪುರಸಭೆ, ದಾವಣಗೆರೆ ಜಿಲ್ಲೆ ಚನ್ನಗಿರಿ ಪುರಸಭೆ, ಕೊಡಗು ಜಿಲ್ಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ಈ ಮಧ್ಯಂತರ ಆದೇಶ ನೀಡಿದೆ.
ಈಗಾಗಲೇ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಅಧಿಸೂಚನೆಗೆ ಮಧ್ಯಂತರ ತಡೆ ನೀಡಲಾಗಿದೆ. ಆ ಅರ್ಜಿಗಳಲ್ಲಿ ಎತ್ತಲಾಗಿದ್ದ ಆಕ್ಷೇಪಗಳನ್ನು ಈಗಿನ ಅರ್ಜಿಗಳಲ್ಲಿ ಎತ್ತಲಾಗಿದೆ. ಹಾಗಾಗಿ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅ.8ರಂದು ಹೊರಡಿಸಿರುವ ಅಧಿಸೂಚನೆಗೆ ಮುಂದಿನ ವಿಚಾರಣೆಗೆವರೆಗೆ ತಡೆ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಅರ್ಜಿಗಳ ವಿಚಾರಣಾ ಮಾನ್ಯತೆಯನ್ನು ಪ್ರಶ್ನಿಸಿ, ಪೌರ ಸಂಸ್ಥೆಗಳ ಯಾವುದೇ ಹುದ್ದೆಯ ಮೀಸಲಾತಿಯನ್ನು ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಲು ಸಂವಿಧಾನದ ಪರಿಚ್ಛೇದ 243 ಅಡಿಯಲ್ಲಿ ಅವಕಾಶವಿಲ್ಲ. ಹಾಗೆಯೇ, ಪರಿಚ್ಛೇದ 226 ಅಡಿ ವಿಚಾರಣೆಗೆ ಮಾನ್ಯತೆ ಹೊಂದಿಲ್ಲ ಎಂದು ಖುದ್ದು ಹೈಕೋರ್ಟ್ ಅನೇಕ ಪ್ರಕರಣಗಳಲ್ಲಿ ತೀರ್ಪು ಕೊಟ್ಟಿದೆ. ಈ ವಿಚಾರವನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕಿದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪೀಠ, ಅಡ್ವೋಕೇಟ್ ಜನರಲ್ ಅವರು ಅರ್ಜಿಗಳ ವಿಚಾರಣಾ ಮಾನ್ಯತೆಯನ್ನು ಪ್ರಶ್ನೆ ಮಾಡಿರುವುದರಿಂದ ಅರ್ಜಿಗಳನ್ನು ತ್ವರಿತ ಇತ್ಯರ್ಥಕ್ಕೆ ಪರಿಗಣಿಸಬೇಕಾಗಿದೆ. ಆದ್ದರಿಂದ ಅಧಿಸೂಚನೆಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗುತ್ತಿದ್ದು, ಒಂದೊಮ್ಮೆ ಯಾವುದಾದರೂ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ ಸ್ಥಾನಗಳಿಗೆ ಚುನಾವಣೆ ನಡೆದು ಹೋಗಿದ್ದರೆ, ಅದು ಈ ಅರ್ಜಿಯ ಅಂತಿಮ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ಹೇಳಿ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿದೆ.