ಬೆಂಗಳೂರು: ಕಳೆದ ಕೆಲವು ತಿಂಗಳಿಂದ ಖಾಲಿ ಉಳಿದಿರುವ ಕರ್ನಾಟಕ ಪೊಲೀಸ್ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರ ಭರ್ತಿಗೆ ಹೈಕೋರ್ಟ್ ಎರಡು ವಾರ ಗಡುವು ನೀಡಿದೆ. ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಎರಡು ವಾರಗಳಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ತಾಕೀತು ಮಾಡಿದೆ.
ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಇನ್ನಷ್ಟು ಕಾಲಾವಕಾಶ ಬೇಕು ಎಂದು ಕೋರಿದರು.
ಅದಕ್ಕೆ ಕಳೆದ ಬಾರಿಯೇ ಕೊನೆಯ ಅವಕಾಶ ನೀಡಲಾಗಿತ್ತು. ಆದರೆ, ಸರ್ಕಾರದ ಪರ ವಕೀಲರು ಕೋರಿಕೊಂಡಿರುವ ಹಿನ್ನೆಲೆಯಲ್ಲಿ ಎರಡು ವಾರ ಕಾಲಾವಕಾಶ ನೀಡಲಾಗುತ್ತಿದ್ದು, ಒಂದೊಮ್ಮೆ ಈ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಅಥವಾ ಬಾಕಿ ಉಳಿದರೆ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ವಿಚಾರಣೆಗೆ ಖುದ್ದಾಗಿ ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚಿಸಿದರು.
ಶಾಸನಬದ್ಧ ಮತ್ತು ಸ್ವಾಯತ್ತ ಹುದ್ದೆಯಾಗಿರುವ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಬೇಕು. ಅಧ್ಯಕ್ಷ ಹುದ್ದೆಯು 2022ರ ಆ.11ರಿಂದ ಖಾಲಿ ಉಳಿದಿದೆ. ಒಂದು ಸದಸ್ಯ ಸ್ಥಾನ 2020ರ ಮೇ 8ರಿಂದ ಮತ್ತು ಮತ್ತೊಂದು ಸದಸ್ಯ ಸ್ಥಾನ 2022ರ ಡಿ.28ರಿಂದ ಖಾಲಿಯಿದೆ. ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸದ ಕಾರಣ ಪ್ರಾಧಿಕಾರ ತನ್ನ ಶಾಸನಾತ್ಮಕ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಬಂದಿರುವ ದೂರುಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಹೀಗಾಗಿ ಕೂಡಲೇ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಕರ್ನಾಟಕ ಕಾನೂನು ವಿವಿಯ ಕುಲಪತಿಗಳು ನೇಮಿಸಿರುವ ಸ್ಥಳೀಯ ಪರಿಶೀಲನಾ ಸಮಿತಿಗೆ ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ
ಕರ್ನಾಟಕ ಕಾನೂನು ವಿವಿಯ ಕುಲಪತಿಗಳು ನೇಮಿಸಿರುವ ಸ್ಥಳೀಯ ಪರಿಶೀಲನಾ ಸಮಿತಿ ರಾಜ್ಯದ ಕಾನೂನು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನಾ ಕಾರ್ಯ ನಡೆಸುವ ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ ಹೇರಿದೆ. ಕಾನೂನು ಕಾಲೇಜುಗಳ ಪರಿಶೀಲನೆ ನಡೆಸಲು ಸ್ಥಳೀಯ ಪರಿಶೀಲನಾ ಸಮಿತಿಯನ್ನು ನೇಮಕ ಮಾಡಿ 2023ರ ಜು.11ರಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳು ಹೊರಡಿಸಿದ್ದ ಆದೇಶ ರದ್ದು ಕೋರಿ ವಿವಿ ಸಿಂಡಿಕೇಟ್ ಸದಸ್ಯ ಬಿ.ಜಿ.ರವಿ ಕುಮಾರ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಅಲ್ಲದೆ, ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಕಾನೂನು ವಿವಿ ಕುಲಪತಿಗಳು ನೇಮಿಸಿರುವ ಸ್ಥಳೀಯ ಪರಿಶೀಲನಾ ಸಮಿತಿ, ಕಾನೂನು ಕಾಲೇಜುಗಳ ಪರಿಶೀಲನೆ ನಡೆಸುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.
ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದ ಸಹಾಯಕ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ, ಹೊಸ ಕಾನೂನು ಕಾಲೇಜುಗಳ ಮಾನ್ಯತೆ ಮಂಜೂರು ಮಾಡಲು ಕೋರಿದ ಅರ್ಜಿ ಮತ್ತು ಮಾನ್ಯತೆ ನವೀಕರಣಕ್ಕೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ, ಚರ್ಚಿಸಿದ ಬಳಿಕ ನಿರ್ಧಾರ ಪಡೆದುಕೊಳ್ಳಬೇಕಿದೆ. ಆದರೆ, ಕಳೆದ ಆರು ತಿಂಗಳಿಂದಲೂ ವಿವಿ ಕುಲಪತಿಗಳು ಸಿಂಡಿಕೇಟ್ ಸಭೆ ನಡೆಸಿಲ್ಲ. ಅಲ್ಲದೆ, ಕಾಲೇಜುಗಳ ಪರಿಶೀಲನೆಗೆ ಸ್ಥಳೀಯ ಪರಿಶೀಲನಾ ಸಮಿತಿ ರಚಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಆದ್ದರಿಂದ 2023ರ ಜು.11ರಂದು ಕುಲಪತಿಗಳು ನೇಮಕ ಮಾಡಿರುವ ಸ್ಥಳೀಯ ಪರಿಶೀಲನಾ ಸಮಿತಿ ರದ್ದುಪಡಿಸಬೇಕು ಎಂದು ಅರ್ಜಿದಾರ ವಕೀಲರು ಕೋರಿದ್ದರು.
ಇದನ್ನೂ ಓದಿ: ವಿಚಾರಣಾ ನ್ಯಾಯಾಲಯಗಳಿಗೆ ಜೀವ ಇರುವವರೆಗೂ ಶಿಕ್ಷೆ ನೀಡುವ ಅಧಿಕಾರವಿಲ್ಲ: ಹೈಕೋರ್ಟ್