ಬೆಂಗಳೂರು : ನ್ಯಾಯಾಲಯದ ಆದೇಶವನ್ನು ಪಾಲಿಸದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸದ ಇಬ್ಬರು ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ನಾಗನಾಯಕನ ಹಟ್ಟಿ ನಿವಾಸಿ ಬಾಬು ನಾಯ್ಕ್ ಎಂಬುವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ನ್ಯಾಯಪೀಠ, ಚಿತ್ರದುರ್ಗ ಜಿಲ್ಲೆಯ ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸುರೇಶ್ ಕುಮಾರ್ ಜಿಲ್ಲಾ ನಿರ್ದೇಶಕ ಗಂಗಯ್ಯ ಅವರ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಈ ಸೂಚನೆ ನೀಡಿದೆ. ಅಲ್ಲದೆ, ಅಂಬೇಡ್ಕರ್ ಅವರನ್ನು ಮಹಾನ್ ಮಾನವತಾವಾದಿ, ಸಂವಿಧಾನದ ಪಿತಾಮಹ ಎಂದು ಗೌರವಿಸುತ್ತೇವೆ. ಅವರ ಹೆಸರಿನಲ್ಲಿನ ನಿಗಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಅರ್ಜಿದಾರರಾದ ಬಾಬು ನಾಯಕ್ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಪಡೆದು ಅಂಬಾಸಿಡರ್ ಕಾರನ್ನು ಖರೀದಿಸಿದ್ದರು. ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ವಾಹನವನ್ನು ನಿಗಮದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ನಡುವೆ ಸಾಲವನ್ನು ನಿಗಮದಿಂದ ಮನ್ನಾ ಮಾಡಲಾಗಿತ್ತು. ಆದರೆ, ಕಾರನ್ನು ಬಿಡುಗಡೆ ಮಾಡಿರಲಿಲ್ಲ. ಜೊತೆಗೆ, ಕಾರು ನಿಲ್ಲಿಸಿದ್ದರ ಪರಿಣಾಮ ಉಗ್ರಾಣ ಶುಲ್ಕವನ್ನಾಗಿ 33,450 ರೂಪಾಯಿ ಪಾವತಿಸುವಂತೆ ಬೇಡಿಕೆ ಇಡಲಾಗಿತ್ತು. ಇದನ್ನು ಪ್ರಶ್ನಿಸಿ ಬಾಬು ನಾಯ್ಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಕಾರು ಬಯಲು ಪ್ರದೇಶದಲ್ಲಿ ನಿಲ್ಲಿಸಿದ್ದು, ಯಾವುದೇ ರೀತಿಯ ಉಗ್ರಾಣ ಶುಲ್ಕ ಪಡೆದುಕೊಳ್ಳದೆ ಕಾರನ್ನು ಬಿಡುಗಡೆ ಮಾಡುವಂತೆ 2014ರಲ್ಲಿ ನಿರ್ದೇಶನ ನೀಡಿತ್ತು. ಆದರೆ, 2019ರವರೆಗೂ ಆದೇಶವನ್ನು ಅನುಷ್ಟಾನ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಬಾಬು ನಾಯಕ್ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ, 2023ರ ಮಾರ್ಚ್ 23ರಂದು ಪ್ರಮಾಣ ಪತ್ರ ಸಲ್ಲಿಸಿದ್ದ ಆರೋಪಿತ ಅಧಿಕಾರಿಗಳು ಮಾರ್ಚ್ 20ರಂದು ಕಾರನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದ್ದರು.
ಇದಕ್ಕೆ ತೀವ್ರ ಅಸಮಾಧಾನಗೊಂಡ ನ್ಯಾಯಪೀಠ, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಬಳಿಕ ಪ್ರತಿವಾದಿ ಆರೋಪಿತ ಅಧಿಕಾರಿಗಳು ಕಾರನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಿರುವುದಾಗಿ ಪತ್ರ ಬರೆದಿದ್ದಾರೆ. ಈ ಬೆಳವಣಿಗೆ ಅತ್ಯಂತ ವಿಳಂಬವಾಗಿದೆ. ಇದು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವ ಅಂಶ ಎಂದು ಗೊತ್ತಾಗಲಿದೆ. ಅಧಿಕಾರಿಗಳ ಈ ನಡೆಯು ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಕಂಡುಬರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಅವರ ವರ್ತನೆ ನ್ಯಾಯಾಲಯದ ವಿರುದ್ಧದ ನಡೆಯಾಗಿದೆ. ಇದನ್ನು ಸಹಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ. ಹೀಗಾಗಿ ಆರೋಪಿತರು ಮೂರು ವರ್ಷಗಳ ವಿಳಂಬ ಮಾಡಿರುವುದಕ್ಕಾಗಿ ದಂಡ ಕಟ್ಟಲು ಅರ್ಹರಾಗಿದ್ದಾರೆ. ಆರೋಪಿತ ಪ್ರತಿವಾದಿಗಳು ತಲಾ 25 ಸಾವಿರ ರೂಪಾಯಿಯಂತೆ ತಮ್ಮ ಸ್ವಂತ ವೆಚ್ಚದಿಂದ ಅರ್ಜಿದಾರರಿಗೆ ಒಟ್ಟು 50 ಸಾವಿರ ರೂ. ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಒಂದು ವೇಳೆ ಎರಡು ವಾರದಲ್ಲಿ 50 ಸಾವಿರ ಪರಿಹಾರವನ್ನು ನೀಡದಿದ್ದರೆ ಅರ್ಜಿದಾರರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ತಿಳಿಸಿದೆ.
ಇದನ್ನೂ ಓದಿ : ಆಲೋಕ್ ಕುಮಾರ್ ಅವರನ್ನು ಎಡಿಜಿಪಿ ಹುದ್ದೆಯಿಂದ ವಜಾಗೊಳಿಸಲು ಕೋರಿದ್ದ ಅರ್ಜಿ ರದ್ದು