ಬೆಂಗಳೂರು : ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅನುದಾನ ದುರ್ಬಳಕೆ ಆರೋಪದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ನಿವೃತ್ತ ಐಎಎಸ್ ಅಧಿಕಾರಿಗಳಾದ ಅಮಿತಾ ಪ್ರಸಾದ್, ಎನ್.ವಿ.ರಮಣರೆಡ್ಡಿ ಹಾಗೂ ಟಿ.ಎಂ.ವಿಜಯ್ ಭಾಸ್ಕರ್ ಅವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತು.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಮೂವರು ನಿವೃತ್ತ ಐಎಎಸ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣ ರದ್ದುಪಡಿಸಿ ಆದೇಶಿಸಿದೆ. ಅರ್ಜಿದಾರರಾದ ಅಮಿತಾ ಪ್ರಸಾದ್, ರಮಣರೆಡ್ಡಿ, ವಿಜಯ್ ಭಾಸ್ಕರ್ ಅವರ ವಿರುದ್ಧ 23ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ (ಭ್ರಷ್ಟಾಚಾರ ತಡೆ ಕಾಯ್ದೆ ವಿಶೇಷ ನ್ಯಾಯಾಲಯ) ನಡೆಯುತ್ತಿರುವ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆ ರದ್ದಾಗಿದೆ. ಆದರೆ, ಈ ಆದೇಶವು ಅರ್ಜಿದಾರರನ್ನು ಹೊರತುಪಡಿಸಿ ಪ್ರಕರಣದ ಇತರೆ ಆರೋಪಿಗಳ ವಿಚಾರಣೆಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಪೂರ್ವಾನುಮತಿ ಪಡೆದುಕೊಂಡಿಲ್ಲ. ಯೋಜನೆಯ ಅನುಷ್ಠಾನಕ್ಕೆ 2010 ರ ಅಕ್ಟೋಬರ್ 1 ರಂದು ಕೇಂದ್ರ ಸರ್ಕಾರದ ಕುಡಿಯವ ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವಾಲಯ, ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ನಡುವೆ ತ್ರಿಪಕ್ಷೀಯ ಒಪ್ಪಂದ ಆಗಿತ್ತು. ಆದರೆ, ಮೂವರು ಅರ್ಜಿದಾರರ ಪೈಕಿ ಯಾರೊಬ್ಬರೂ ಆ ತ್ರಿಪಕ್ಷೀಯ ಒಪ್ಪಂದದ ಪಾಲುದಾರರು ಅಲ್ಲ. ಅಮಿತಾ ಪ್ರಸಾದ್ 2011ರ ಮೇ 16 ರಿಂದ 2012 ರ ಜೂನ್ 8 ರವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಮಣರೆಡ್ಡಿ 2012 ರ ಸೆ. 22 ರಿಂದ 2013 ರ ಮೇ 31 ಹಾಗೂ ವಿಜಯ್ ಭಾಸ್ಕರ್ ಅವರು 2012 ರ ಮೇ 31 ರಿಂದ 2015 ರ ಏಪ್ರಿಲ್ 24ರ ವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಿಜಯ್ ಭಾಸ್ಕರ್ ಅವರು ಹುದ್ದೆಯಿಂದ ನಿರ್ಗಮಿಸಿದ ಬಳಿಕ 2015 ರ ಮೇ 4 ರಂದು ಗ್ರಾಮೀಣ ನೀರು ಸರಬರಾಜು ಯೋಜನೆಯ ಆಯುಕ್ತರು ವರದಿ ಸಲ್ಲಿಸಿದ್ದು, ಅದರಲ್ಲಿ 'ಹಣ ದುರ್ಬಳಕೆ' ಆಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ, ಯಾವ ಅಧಿಕಾರಿಯ ಹೆಸರನ್ನೂ ಹೇಳಿಲ್ಲ. ಈ ವರದಿಯ ಆಧಾರದಲ್ಲಿ ಲೆಕ್ಕಪರಿಶೋಧನೆ ನಡೆಸಲಾಗಿದ್ದು, 2015 ರ ಅ. 1 ರಂದು ಸಲ್ಲಿಸಲಾದ ಆ ಲೆಕ್ಕಪರಿಶೋಧನಾ ವರದಿಯಲ್ಲಿ ಹಣ ದುರ್ಬಳಕೆಗೆ ಪಿ.ಬೋರೇಗೌಡ ಹಾಗೂ ರಾಮಕೃಷ್ಣ ಎಂಬುವರು ಹೊಣೆ ಎಂದು ಹೇಳಲಾಗಿತ್ತು. ಆ ವರದಿಯ ಆಧಾರದಲ್ಲಿ ದೂರು ದಾಖಲಿಸಲಾಗಿದ್ದು, ದೂರಿನಲ್ಲಿ ಮೂವರು ಅರ್ಜಿದಾರ ಅಧಿಕಾರಿಗಳ ವಿರುದ್ಧ ಆರೋಪ ಮಾಡಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ದೂರು ಇಲ್ಲ, ಆರೋಪವೂ ಇಲ್ಲ. 2019 ರ ಜ.9 ರಂದು ಪೊಲೀಸರು ಬಿ-ರಿಪೋರ್ಟ್ ಸಹ ಹಾಕಿದ್ದಾರೆ. ಪೊಲೀಸರು ಹಾಕಿದ್ದ ಚಾರ್ಜ್‌ಶೀಟ್‌ನಲ್ಲೂ ಮೂವರು ಅರ್ಜಿದಾರರ ಹೆಸರು ಇಲ್ಲ ಎಂದು ತಿಳಿಸಿರುವ ನ್ಯಾಯಪೀಠ ಪ್ರಕರಣ ರದ್ದು ಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಗ್ರಾಮೀಣ ಕುಡಿಯುವ ನೀರು ಯೋಜನೆಯ ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಣ ದುರ್ಬಳಕೆಯಿಂದ ರಾಜ್ಯಕ್ಕೆ 269 ಕೋಟಿ ನಷ್ಟವಾಗಿದೆ ಎಂದು ಹೇಳಲಾಗಿತ್ತು. ಇಲಾಖಾ ವಿಚಾರಣೆ, ಲೆಕ್ಕಪರಿಶೋಧನೆ, ಪೊಲೀಸ್ ಹಾಗೂ ಎಸಿಬಿ (ಲೋಕಾಯುಕ್ತ) ವಿಚಾರಣೆ ನಡೆದಿತ್ತು. ಈ ಮಧ್ಯೆ ಕೋಲಾರ ಮೂಲಕ ಸಾಮಾಜಿಕ ಕಾರ್ಯಕರ್ತ ವಿ.ನಾರಾಯಣಸ್ವಾಮಿ ಎಂಬವರು ಖಾಸಗಿ ದೂರು ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಅಂಗೀಕರಿಸಿ ವಿಚಾರಣಾ ನ್ಯಾಯಾಲಯ 2022 ರ ಜನವರಿ 13 ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಮೂವರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಮೃತ ವ್ಯಕ್ತಿಯ ಸಹೋದರಿಗೆ ಅನುಕಂಪದ ಉದ್ಯೋಗ ನೀಡಲಾಗದು : ಹೈಕೋರ್ಟ್