ಬೆಂಗಳೂರು: ಓಲಾ ಮತ್ತು ಉಬರ್ ಆ್ಯಪ್ ಆಧಾರಿತ ಆಟೋ ರಿಕ್ಷಾ ಸೇವೆ ಒದಗಿಸಲು ಪ್ರಯಾಣ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ 15 ದಿನ ಕಾಲಾವಕಾಶ ನೀಡಿರುವ ಹೈಕೋರ್ಟ್, ಅಲ್ಲಿಯವರೆಗೆ ಅಗ್ರಿಗೇಟರ್‌ಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಸೂಚನೆ ನೀಡಿದೆ.
ಆ್ಯಪ್ ಆಧಾರಿತ ಒಲಾ ಮತ್ತು ಉಬರ್ ಆಟೋ ರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸಾರಿಗೆ ಇಲಾಖೆ ಅ.11ರಂದು ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರು ಈ ಆದೇಶ ಮಾಡಿದರು.
ಅಗ್ರಿಗೇಟರ್‌ಗಳು ಸಹ ರಾಜ್ಯ ಸರ್ಕಾರ ನಿಗದಿಪಡಿಸಿರುವ ದರಕ್ಕೆ ಶೇ.10ರಷ್ಟು ಹೆಚ್ಚುವರಿ ದರ ಮತ್ತು ಒದಗಿಸುತ್ತಿರುವ ಸೇವೆಗೆ ಅನ್ವಯಿಕ ತೆರಿಗೆ ಪಡೆಯಬೇಕು ಎಂದು ನಿರ್ದೇಶಿಸಿದೆ. ಅಲ್ಲದೆ, ದರ ನಿಗದಿ ವೇಳೆ ಎಲ್ಲ ಪಾಲುದಾರರ ಅಹವಾಲನ್ನು ಸರ್ಕಾರ ಆಲಿಸಬೇಕು. ಆ ಸಮಯದವರೆಗೆ ಸರ್ಕಾರ ಮತ್ತು ಅದರ ಪ್ರತಿನಿಧಿಗಳು ಅಗ್ರಿಗೇಟರ್‌ಗಳ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಹೇಳಿತು.
ಆಟೋರಿಕ್ಷಾ ಸೇವೆ ಒದಗಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನಿರ್ದೇಶಿಸಿದ ನ್ಯಾಯ ಪೀಠವ ಅರ್ಜಿ ವಿಚಾರಣೆಯನ್ನು ನ.7ಕ್ಕೆ ಮುಂದೂಡಿದೆ. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಆಟೋ ಸೇವೆ ಸ್ಥಗಿತಗೊಳಿಸಲು ಸೂಚಿಸಿ ಸಾರಿಗೆ ಸರ್ಕಾರ ಹೊರಡಿಸಿರುವ ಆದೇಶ ಕಾನೂನು ಬಾಹಿರ ಹಾಗೂ ಏಕಪಕ್ಷೀಯವಾಗಿದೆ. ತಮ್ಮಿಂದ ಅವಹಾಲು ಆಲಿಸದೆ ಮತ್ತು ಸಕಾರಣ ನೀಡದೆ ಈ ಆದೇಶ ಹೊರಡಿಸಲಾಗಿದೆ ಎಂದರು.
ಸರ್ಕಾರದ ಆರೋಪದಲ್ಲಿ ಸತ್ಯಾಂಶವಿಲ್ಲ: ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ದರ ಪಡೆಯಲಾಗುತ್ತಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳು ಇಲ್ಲ. ಆದ ಕಾರಣ ಅರ್ಜಿದಾರರು ಪಡೆಯುತ್ತಿರುವ ದರವು ಸಮಂಜಸವಾಗಿದೆ. ಜೊತೆಗೆ ಅರ್ಜಿದಾರ ಕಂಪನಿಗಳು ಅನ್ವಯಿಕ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡಲಾಗುತ್ತಿವೆ ಎಂದು ವಕೀಲರು ತಿಳಿಸಿದರು.
ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು-2016ರ ನಿಯಮಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ. ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಅನುಮತಿ ಪಡೆಯದೆ ಸರ್ಕಾರ ಅರ್ಜಿದಾರರ ವಿರುದ್ಧ ಬಲವಂತದ ಕ್ರಮಜರುಗಿಸಬಾರದು ಎಂಬುದಾಗಿ ವಿಭಾಗೀಯ ನ್ಯಾಯಪೀಠ 2016ರ ಡಿ.13ರಂದು ಆದೇಶಿಸಿದೆ. ಅದರಂತೆ ಸರ್ಕಾರವು ಪರವಾನಗಿ ಪಡೆಯುವಂತೆ ಬಲವಂತ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರು ವಾದ ಮಂಡಿಸಿದ್ದರು.
ಇದನ್ನೂ ಓದಿ: ರಾಜಧಾನಿಯಲ್ಲಿ ಓಲಾ, ಉಬರ್ ಕ್ಯಾಬ್ ಆಟೋ ಸೇವೆಯಿಂದ ನಿತ್ಯ 10 ಕೋಟಿ ಆದಾಯ
ರಾಜ್ಯ ಅಡ್ವೋಕೇಟ್ ಜನರಲ್ ವಾದ ಮಂಡಿಸಿ, ಆಟೋರಿಕ್ಷಾ ಸೇವೆ ಒದಗಿಸಲು ಪರವಾನಗಿ ಪಡೆಯುವುದಕ್ಕೆ ಯಾವುದೇ ಸನ್ನಿವೇಶದಲ್ಲಾದರೂ ವಿನಾಯ್ತಿ ನೀಡಲಾಗದು. ಸಾರ್ವಜನಿಕರು ನೀಡಿರುವ ದೂರುಗಳ ಆಧಾರದ ಮೇಲೆ ಸರ್ಕಾರವು ಅ.6 ಮತ್ತು ಅ.11ರಂದು ಆದೇಶ ಮಾಡಿದೆ. ಬಹುತೇಕ ಅಗ್ರಿಗೇಟರ್ರ್‌ಗಳು ಪರವಾನಗಿ ಪಡೆಯದೇ ಕಾರ್ಯಚರಣೆ ಮಾಡುತ್ತಿದ್ದಾರೆ. ಹಾಗಾಗಿ, ಅವರ ಕಾರ್ಯಚರಣೆ ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದರು.
ಸರ್ಕಾರ ದರ ನಿಗದಿಪಡಿಸಿ 2021ರರ ನ.6ರಂದು ಹೊರಡಿಸಿದೆ. ಅದರಲ್ಲಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚಿನ ದರವನ್ನು ಅರ್ಜಿದಾರರ ಅಗ್ರಿಗೇಟರ್‌ಗಳು ಸಂಗ್ರಹಿಸುತ್ತಿದ್ದಾರೆ. ಇನ್ನೂ 12ರಿಂದ 15ದಿನಗಳಲ್ಲಿ ಸರ್ಕಾರ ದರ ನಿಗದಿಪಡಿಸಲು ಸಿದ್ಧವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93ರನ್ನು ತಿದ್ದುಪಡಿ ಮಾಡಿ, ಅಗ್ರಿಗೇಟರ್‌ಗಳು ಪರವಾನಗಿ ಪಡೆದುಕೊಳ್ಳುವ ನಿಯಮವನ್ನು ಸೇರಿಸಲಾಗಿದೆ. ಅದರಂತೆ ಸೆಕ್ಷನ್ 93(1)ಕ್ಕೆ 2020ರಲ್ಲಿ ತಿದ್ದುಪಡಿ ತರಲಾಗಿದ್ದು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಪಾಲಿಸಬಹುದು. ದರ ನಿಯಂತ್ರಣದ ಬಗ್ಗೆ ಮಾರ್ಗಸೂಚಿಯ ನಿಯಮ 30 ಹೇಳುತ್ತದೆ. ಹಾಗಾಗಿ, ಮಾರ್ಗಸೂಚಿಗಳನ್ನು ಪರಿಗಣಿಸಬೇಕಿದೆ ಹಾಗೂ ದರ ನಿಗದಿಪಡಿಸಲು ಸರ್ಕಾರ ಮುಕ್ತ ಹಾಗೂ ಸಿದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ನೋಟಿಸ್ ನೀಡಿದ ಬಳಿಕವೂ ಸಂಚರಿಸುವ ಓಲಾ, ಉಬರ್, ಆಟೋ ಜಪ್ತಿಗೆ ಸೂಚನೆ: ಸಚಿವ ಶ್ರೀರಾಮುಲು