ಬೆಂಗಳೂರು: ರಾಜ್ಯದಲ್ಲಿ ಅಪರಾಧ ಸಾಬೀತಾಗಿ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಪರವಾಗಿ ಮೇಲ್ಮನವಿ ಸಲ್ಲಿಸಿರುವ ಮತ್ತು ಅವರಿಗೆ ಉಚಿತ ಕಾನೂನು ನೆರವು ನೀಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಕಾನೂನು ಸೇವಾ ಸಮಿತಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಕೊಲೆ ಪ್ರಕರಣವೊಂದರ ಸಂಬಂಧ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಇಬ್ಬರ ಪೈಕಿ ಓರ್ವ ಅಪರಾಧಿ ಮಾತ್ರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ. ಮೇಲ್ಮನವಿ ಸಲ್ಲಿಸುವುದು ಶಾಸನಬದ್ಧ ಹಕ್ಕಾಗಿದೆ. ತಮ್ಮ ಪರವಾಗಿ ಸ್ವಂತ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅಂತಹವರಿಗೆ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ಸೇವೆ ಒದಗಿಸಲಾಗುತ್ತದೆ. ಕಾನೂನು ಸೇವೆ ಪಡೆಯಲು ಅವರು ಅರ್ಹರಾಗಿರುತ್ತಾರೆ.
ಉಚಿತ ಕಾನೂನು ನೆರವು ಕಲ್ಪಿಸುವ ಮೂಲಕ ಮೇಲ್ಮನವಿ ಸಲ್ಲಿಸಲು ಅನುಕೂಲ ಮಾಡಿಕೊಡುವುದು ಸರ್ಕಾರ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಮತ್ತದರ ಸಮಿತಿಗಳ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ರಾಜ್ಯದಲ್ಲಿ ಯಾವೆಲ್ಲಾ ಪ್ರಕರಣಗಳಲ್ಲಿ ಎಷ್ಟು ಆರೋಪಿಗಳನ್ನು ಅಪರಾಧಿಗಳಾಗಿ ತೀರ್ಮಾನಿಸಲಾಗಿದೆ. ಪ್ರತಿ ಪ್ರಕರಣದಲ್ಲಿ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದಾರೆಯೇ. ಅಂತಹ ಮೇಲ್ಮನವಿಗಳನ್ನು ಖಾಸಗಿ ವಕೀಲರು ಸಲ್ಲಿಸಿದ್ದಾರೆಯೇ ಅಥವಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಿರುವ ವಕೀಲರು ಸಲ್ಲಿಸಿದ್ದಾರೆಯೇ. ಒಂದೊಮ್ಮೆ ಮೇಲ್ಮನವಿ ಸಲ್ಲಿಸದಿದ್ದರೆ, ಏಕೆ ಮೇಲ್ಮನವಿ ಸಲ್ಲಿಸಲಾಗಿಲ್ಲ. ಉಚಿತ ಕಾನೂನು ಸೇವೆ ದೊರಕಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ಅ.27ರೊಳಗೆ ಹೈಕೋರ್ಟ್‌ನ ಮೂರು ಪೀಠಗಳ ಕಾನೂನು ಸೇವೆಗಳ ಸಮಿತಿಗಳು ವರದಿ ಸಲ್ಲಿಸಬೇಕು. ಈ ಬಗ್ಗೆ ನಿಗಾಯಿಡಲು ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಮತ್ತು ಸೆಂಟ್ರಲ್ ಪ್ರಾಸಸ್ ಕೋ ಆರ್ಡಿನೇಟರ್ (ಸಿಪಿಸಿ) ಅಗತ್ಯ ಸಾಫ್ಟ್ವೇರ್ ರೂಪಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಕೊಲೆ ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳನ್ನು ಅಪರಾಧಿಗಳಾಗಿ ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿ ಧಾರವಾಡದ ಪ್ರಧಾನ ಜಿಲ್ಲಾ ನ್ಯಾಯಾಲಯವು 2019ರಲ್ಲಿ ಆದೇಶಿಸಿತ್ತು. ಅದಾದರ ಎರಡು ವರ್ಷಗಳ ಬಳಿಕ ಎರಡನೇ ಆರೋಪಿ ಪರ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಎರಡನೇ ಅಪರಾಧಿ ಪರ ವಕಾಲತ್ತು ವಹಿಸಿದ್ದ ವಕೀಲರು ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯವೇ ಅಮಿಕಸ್ ಕ್ಯೂರಿಯನ್ನು(ನ್ಯಾಯಾಲಯಕ್ಕೆ ನೆರವಾಗುವವರು) ನೇಮಿಸಿತ್ತು. ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಮೊದಲ ಅಪರಾಧಿಯ ಪರವಾಗಿ ಮೇಲ್ಮನವಿ ಸಲ್ಲಿಸಿರಲಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: ಆವೇಶದಿಂದ ನಡೆದ ಹಲ್ಲೆಯಿಂದ ಪತ್ನಿ ಸತ್ತರೆ ಕೊಲೆ ಎಂದು ಪರಿಗಣಿಸಲಾಗದು: ಹೈಕೋರ್ಟ್