ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಕೆರೆಗಳು, ಅವುಗಳ ಬಫರ್ ಝೋನ್ ಹಾಗೂ ಒತ್ತುವರಿ ಕುರಿತಂತೆ ಸಮಗ್ರ ಸಮೀಕ್ಷೆ ನಡೆಸುವಂತೆ ನ್ಯಾಯಾಲಯ ಈ ಹಿಂದೆ ನೀಡಿರುವ ಆದೇಶದ ಅನುಪಾಲಾನಾ ವರದಿಯನ್ನು ಜೂನ್ 15ರೊಳಗೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಜ್ಯದಲ್ಲಿರುವ ಕೆರೆಗಳ ಸಂರಕ್ಷಣೆ ಕೋರಿ ಸಿಟಿಜನ್ ಆ್ಯಕ್ಷನ್ ಗ್ರೂಪ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಆ ವೇಳೆ, ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, 2019ರಲ್ಲಿಯೇ ರಾಜ್ಯದಲ್ಲಿರುವ ಎಲ್ಲ ಕೆರೆಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿತ್ತು, ಈ ಸಂಬಂಧ ಸರ್ಕಾರ ಯಾವೆಲ್ಲ ಕ್ರಮ ಕೈಗೊಂಡಿದೆ. ಏನೆಲ್ಲಾ ಪ್ರಗತಿ ಸಾಧಿಸಲಾಗಿದೆ ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಬಹುತೇಕ ಅಧಿಕಾರಿಗಳು ಕೋವಿಡ್ ನಿರ್ವಹಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಪ್ರಸ್ತುತ ಶೇ.50ರಷ್ಟು ಸಮೀಕ್ಷೆ ನಡೆದಿರುವ ಮಾಹಿತಿ ಇದ್ದು, ವರದಿ ಸಲ್ಲಿಸಲು ಕಾಲಾವಕಾಶ ಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹಾಗಿದ್ದರೆ ನ್ಯಾಯಾಲಯದ ಆದೇಶದ ಮೇರೆಗೆ ಎಷ್ಟು ಸಮೀಕ್ಷೆ ನಡೆದಿದೆ. ಪ್ರಗತಿ ಏನು ಎಂಬ ವಿವರಗಳನ್ನು ಮುಂದಿನ ವಿಚಾರಣೆಯೊಳಗೆ ಸಲ್ಲಿಸಿ ಎಂದು ಸೂಚಿಸಿತು. ಹಾಗೆಯೇ, ಕೆರೆಗಳ ಸಮೀಕ್ಷೆ ಅತ್ಯಂತ ಅಗತ್ಯವಾಗಿದ್ದು, ಸಮೀಕ್ಷೆ ನಡೆಸಿದರೆ ಕೆರೆಗಳ ವಿಸ್ತೀರ್ಣ, ಬಫರ್ ಝೋನ್, ಒತ್ತುವರಿಯಾಗಿರುವ ಪ್ರದೇಶವೆಷ್ಟು ಎಂಬೆಲ್ಲ ವಿವರಗಳು ಲಭ್ಯವಾಗಲಿವೆ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.
ಓದಿ: ಕೋವಿಡ್ 3ನೇ ಅಲೆ ಸಿದ್ಧತೆ: ವಾರದಲ್ಲಿ ಸರ್ಕಾರಕ್ಕೆ ಕಾರ್ಯಪಡೆ ವರದಿ ಸಲ್ಲಿಕೆ