ಬೆಂಗಳೂರು: ಮೆಟ್ರೋ ರೈಲು ಯೋಜನೆಯ ಮೊದಲು ಹಾಗೂ ಎರಡನೇ ಹಂತಗಳಲ್ಲಿ ಕೇಂದ್ರದ ನಿಯಮಗಳನ್ನು ಪಾಲಿಸಿರುವ ಕುರಿತು ಪರಿಶೀಲನಾ ವರದಿ ನೀಡಲು ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯನ್ನು (ಐಐಎಂಬಿ) ನೇಮಕ ಮಾಡುವಂತೆ ಹೈಕೋರ್ಟ್ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್ಸಿಎಲ್) ನಿರ್ದೇಶಿಸಿದೆ.
ಮೆಟ್ರೋ ಯೋಜನೆ ಜಾರಿಗೆ ಮುನ್ನಾ ಕೇಂದ್ರ ಸರ್ಕಾರ ವಿಧಿಸಿದ್ದ ನಿಯಮಗಳನ್ನು ಯೋಜನೆ ಅನುಷ್ಠಾನದ ವೇಳೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಪರಿಸರವಾದಿ ಡಿ.ಟಿ. ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಪೀಠ ತನ್ನ ನಿರ್ದೇಶನದಲ್ಲಿ ನಮ್ಮ ಮೆಟ್ರೋ ಮೊದಲನೇ ಮತ್ತು ಎರಡನೇ ಹಂತಗಳ ಕಾಮಗಾರಿಗಳಿಗೆ ಸಂಬಂಧ ಎಲ್ಲಾ ದಾಖಲೆಗಳನ್ನು ಬಿಎಂಆರ್ ಸಿಎಲ್ ಅಧಿಕಾರಿಗಳು ಐಐಎಂಗೆ ಒಗದಿಸಬೇಕು. ಈ ದಾಖಲೆಗಳು ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳನ್ನು ತಪಾಸಣೆ ಮಾಡಬೇಕು. ಒಪ್ಪಂದದ ನಿಯಮಗಳ ಪ್ರಕಾರ ಯೋಜನೆ ಅನುಷ್ಠಾನಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಐಐಎಂ ವರದಿ ನೀಡಬೇಕು ಎಂದು ನಿರ್ದೇಶಿಸಿದೆ.
ಓದಿ: ಹೈಕಮಾಂಡ್ಗೆ ಈಶ್ವರಪ್ಪ ದೂರು ನೀಡಿದ್ದು ಶೋಭೆ ತರುವಂತಹದಲ್ಲ- ಬಿ.ಸಿ. ಪಾಟೀಲ್ ಬೇಸರ
ಅರ್ಜಿದಾರರು ನಮ್ಮ ಮೆಟ್ರೋ ಮೊದಲನೇ ಹಂತಕ್ಕೆ 2006ರ ಮೇ 11ರಂದು ಮಂಜೂರಾತಿ ನೀಡಿ, 2010ರ ಡಿ.24ರಂದು ಒಪ್ಪಂದಕ್ಕೆ ಬಿಎಂಆರ್ ಸಿಎಲ್ ಸಹಿ ಹಾಕಿತ್ತು. ಎರಡನೇ ಹಂತದ ಯೋಜನೆಗೆ 20114ರ ಫೆ.21ರಂದು ಮಂಜೂರಾತಿ ನೀಡಿ 2017ರ ಫೆ.24ರಂದು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಗಳಲ್ಲಿ ಹೇಳಲಾಗಿದ್ದ ಸಮಗ್ರ ಸಾರಿಗೆ ಯೋಜನೆ ಹಾಗೂ ಸಂಚಾರ ವ್ಯವಸ್ಥೆಯ ಸುಧಾರಣೆ ಕುರಿತ ಯೋಜನೆಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಒಪ್ಪಂದದಂತೆ ಯೋಜನೆಗಳನ್ನು ರೂಪಿಸಲು ಸರ್ಕಾರ ಹಾಗೂ ಬಿಎಂಆರ್ಸಿಎಲ್ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.