ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಪ್ಲಾನ್ ಮಾಡಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿದಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟನೆ ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕ್ರಮವನ್ನು ಪ್ರಶ್ನಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಇಂದು ನಡೆಯಿತು.
ಈ ವೇಳೆ ಸರ್ಕಾರ ಪರ ವಕೀಲರು ವಾದ ಮಂಡನೆ ಮಾಡಿ ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಬೆಂಗಳೂರು ಅಭಿವದ್ಧಿ ಪ್ರಾಧಿಕಾರ ನೋಟಿಫಿಕೇಶನ್ ಹೊರಡಿಸಿತ್ತು. ಆದರೆ ಈಗ ಯೋಜನೆಯಿಂದ ಸರ್ಕಾರ ಹಿಂದೆ ಸರಿದಿದೆ ಎಂದು ಪೀಠಕ್ಕೆ ಮೆಮೋ ಸಲ್ಲಿಸಿದರು. ಈ ಮೆಮೋ ದಾಖಲಿಸಿಕೊಂಡ ನ್ಯಾಯಪೀಠವು ಅರ್ಜಿಯನ್ನು ಇತ್ಯರ್ಥಗೊಳಿಸಿತು.
ಮೇಲ್ಸೇತುವೆ ಯೋಜನೆ ಕೈಗೊಳ್ಳಲು 2016ರಲ್ಲಿ ನಿರ್ಧರಿಸಿದ್ದ ಸರ್ಕಾರ ಯೋಜನೆಗಾಗಿ ನೂರಾರು ಮರಗಳನ್ನು ಕತ್ತರಿಸಲು ನಿರ್ಧರಿಸಿತ್ತು. ಇದಕ್ಕೆ ಸಾರ್ವಜನಿಕರು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.