ಬೆಂಗಳೂರು : ಮೀಸಲು ಪಟ್ಟಿ ಸಿದ್ಧಗೊಂಡಿರುವ 21 ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಬಹುದೇ ಎಂದು ರಾಜ್ಯ ಚುನಾವಣಾ ಆಯೋಗವನ್ನು ಪ್ರಶ್ನಿಸಿರುವ ಹೈಕೋರ್ಟ್, ಈ ಬಗ್ಗೆ ನಿಲುವು ತಿಳಿಸುವಂತೆ ನಿರ್ದೇಶಿಸಿದೆ.
ಅವಧಿ ಮುಗಿದಿರುವ ಗ್ರಾಪಂಗಳಿಗೆ ಚುನಾವಣೆ ನಡೆಸುವ ಕುರಿತು ವಿಧಾನ ಪರಿಷತ್ ಸದಸ್ಯ ಕೆ ಸಿ ಕೊಂಡಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್ ವಾದಿಸಿ, ಅವಧಿ ಮುಗಿಯುವುದರೊಳಗೆ ಪಂಚಾಯತ್‌ಗಳಿಗೆ ಚುನಾವಣೆ ನಡೆಸಬೇಕಿತ್ತು. ಆದರೀಗ, ಅವಧಿ ಮೀರಿ ಹೋಗಿದೆ. ಹೀಗಾಗಿ, ಮೀಸಲು ಪಟ್ಟಿ ಸಿದ್ದವಿರುವ ಗ್ರಾಮ ಪಂಚಾಯತ್‌ಗಳ ಚುನಾವಣೆಗೆ ವೇಳಾಪಟ್ಟಿ ಹೊರಡಿಸಬಹುದು. ರಾಜ್ಯದಲ್ಲಿ ಲಾಕ್‌ಡೌನ್ ಮುಗಿದಿದ್ದು, ಎಂದಿನಂತೆ ಚಟುವಟಿಕೆಗಳು ಆರಂಭಗೊಂಡಿವೆ. ಹಾಗಾಗಿ ಚುನಾವಣೆ ನಡೆಸಲು ಸರ್ಕಾರ ಮತ್ತು ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ಚುನಾವಣಾ ಆಯೋಗದ ಪರ ವಾದಿಸಿದ ಹಿರಿಯ ವಕೀಲ ಕೆ ಎನ್ ಫಣೀಂದ್ರ, ರಾಜ್ಯದ 30 ಜಿಲ್ಲೆಗಳ ಪೈಕಿ 21 ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳ ಮೀಸಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇನ್ನುಳಿದ 9 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಆಗಸ್ಟ್ 11ಕ್ಕೆ ಮೀಸಲು ಪಟ್ಟಿ ಪ್ರಕಟಿಸಲಾಗುವುದು. ಬಾಕಿ ಇರುವ ಬೆಂಗಳೂರು ನಗರ ಜಿಲ್ಲಾಡಳಿತ ಪಟ್ಟಿ ಸಿದ್ಧಪಡಿಸಲು ಆಗಸ್ಟ್ 24ರವರೆಗೆ ಸಮಯ ಕೇಳಿದೆ. ಇನ್ನೂ, ಸೆಪ್ಟೆಂಬರ್ ಮೊದಲ ವಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮಗೊಳ್ಳಲಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸೆಪ್ಟಂಬರ್ ಮೊದಲ ವಾರದಲ್ಲಿ ಮತದಾರರ ಪಟ್ಟಿ ಅಂತಿಮಗೊಳ್ಳಲಿದೆ ಮತ್ತು ಪ್ರಸ್ತುತ 21 ಜಿಲ್ಲೆಗಳ ಮೀಸಲು ಪಟ್ಟಿ ಸಿದ್ಧವಿದೆ ಎನ್ನುತ್ತೀರಿ. ಹಾಗಿದ್ದರೆ, ಮೀಸಲು ಪಟ್ಟಿ ಸಿದ್ಧವಿರುವ 21 ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಕ್ರಮಕೈಗೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿತು. ಹಾಗೆಯೇ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವ ಕುರಿತು ಆಯೋಗದ ನಿಲುವು ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿತು.